ವಿರಾಟ್ ಕೊಹ್ಲಿಗೆ ಹೆಚ್ಚಿನ ಅಭ್ಯಾಸದ ಅಗತ್ಯವಿಲ್ಲ: ಬ್ಯಾಟಿಂಗ್ ಕೋಚ್ ವಿಕ್ರಮ್ ಸೆಂಚುರಿಯನ್: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಕೇವಲ ಒಂದು ನೆಟ್ ಸೆಷನ್‌ ಅಭ್ಯಾಸ ನಡೆಸಿ ಸೆಂಚುರಿಯನ್ ಟೆಸ್ಟ್‌ಗೆ ಆಗಮಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ವಿರಾಟ್ ಕೊಹ್ಲಿ ಅವರಿಗೆ ವೃತ್ತಿಜೀವನದ ಈ ಹಂತದಲ್ಲಿ ಹೆಚ್ಚಿನ ಪ್ರಾಕ್ಟೀಸ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. . ಏಕೈಕ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿಯೂ ಕೊಹ್ಲಿ ಭಾಗವಹಿಸಿರಲಿಲ್ಲ. ಯುಕೆಯಲ್ಲಿರುವ ತಮ್ಮ ಕುಟುಂಬವನ್ನು ಭೇಟಿಯಾಗಲು 4 ದಿನಗಳ ಚುಟುಕು ರಜೆಯ ಪೂರ್ವಾನುಮತಿ ಪಡೆದು ತೆರಳಿದ್ದರು. ಆದರೂ, ಸಾಕಷ್ಟು ಬೌನ್ಸ್ ಆಗುವ ಸೆಂಚುರಿಯನ್ ಪಿಚ್‌ನಲ್ಲಿ ಕೊಹ್ಲಿ ಉತ್ತಮ ಬ್ಯಾಟಿಂಗ್ ನಡೆಸಿದರು. 38 ರನ್‌ ಗಳಿಸಿದ್ದ ಅವರು ರಬಾಡಾಗೆ ವಿಕೆಟ್ ಒಪ್ಪಿಸಿದರು. ಮಳೆಯಿಂದ ತಡವಾಗಿ ಆರಂಭವಾದ ಪಂದ್ಯದಲ್ಲಿ ಭಾರತ ಮೊದಲ ದಿನದಾಟದಂತ್ಯಕ್ಕೆ ಎಂಟು ವಿಕೆಟ್‌ಗಳಿಗೆ 208 ರನ್‌ ಗಳಿಸಿತ್ತು. ‘ವೃತ್ತಿಜೀವನದ ಈ ಹಂತದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಹೆಚ್ಚಿನ ಅಭ್ಯಾಸದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ’ಎಂದು ಮಂಗಳವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಆರಂಭಿಕ ದಿನದ ಆಟದ ಅಂತ್ಯದ ನಂತರ ರಾಥೋಡ್ ಹೇಳಿದರು. ‘ಅವರು ಬಹಳ ಸಮಯದಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಾಕಷ್ಟು ಅಭ್ಯಾಸ ಮಾಡಿದ್ದಾರೆ. ಹಾಗಾಗಿ, ಅವರು ಸ್ವಲ್ಪ ಕಡಿಮೆ ಅಭ್ಯಾಸ ಮಾಡಿದರೂ ಪರವಾಗಿಲ್ಲ. ಚೆನ್ನಾಗಿ ಆಡಬಲ್ಲರು. ಅದನ್ನು ಇವತ್ತಿನ ಆಟದಲ್ಲಿ ನೋಡಿದ್ದೇವೆ’ ಎಂದು ಅವರು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.