ಅಫ್ಗನ್‌ನ ಮೂವರು ಬೌಲರ್‌ಗಳು ಐಪಿಎಲ್‌ ಆಡುವುದು ಅನುಮಾನ ಕಾಬೂಲ್‌ : ಅಫ್ಗಾನಿಸ್ತಾನದ ಕ್ರಿಕೆಟಿಗರಾದ ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್ ಮತ್ತು ಫಜಲ್ ಹಕ್ ಫಾರೂಕಿ ಅವರು ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವುದು ಅನುಮಾನವಾಗಿದೆ. ಈ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಬೇಕಿದ್ದ ಎನ್‌ಒಸಿಯನ್ನು ಅಮಾನ್ಯಗೊಳಿಸಲು ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿ (ಎಸಿನಿ) ನಿರ್ಧರಿಸಿದೆ. 2024ರ ಜನವರಿಯಿಂದ ಅನ್ವಯವಾಗುವ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಈ ಮೂವರು ಆಟಗಾರರು ನಿರಾಕರಿಸಿ, ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಲು ನಿರಾಕ್ಷೇಪನಾ ಪ್ರಮಾಣ ಪತ್ರ (ಎನ್‌ಒಸಿ) ನೀಡುವಂತೆ ಎಸಿಬಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿ ಈ ಕಠಿಣ ಕ್ರಮ ತೆಗೆದುಕೊಂಡಿದೆ. ‘ರಾಷ್ಟ್ರೀಯ ಕ್ರಿಕೆಟ್‌ ತಂಡದ ಈ ಮೂವರು ಆಟಗಾರರ 2024ರ ವಾರ್ಷಿಕ ಕೇಂದ್ರೀಯ ಒಪ್ಪಂದಗಳನ್ನು ವಿಳಂಬಗೊಳಿಸಲು ನಿರ್ಧರಿಸಿದೆ. ಅಲ್ಲದೆ, ಅವರಿಗೆ ಎನ್‌ಒಸಿ ನೀಡದಿರಲು ತೀರ್ಮಾನಿಸಲಾಗಿದೆ’ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂವರು ಮುಂಬರುವ ಐಪಿಎಲ್‌ನಲ್ಲಿ ಆಡಬೇಕಿತ್ತು. ಆಫ್ ಸ್ಪಿನ್ನರ್ ಮುಜೀಬ್ ₹ 2 ಕೋಟಿ ಮೂಲಬೆಲೆಗೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾಗಿದ್ದರು. ಉಳಿದಂತೆ ವೇಗಿಗಳಾದ ನವೀನ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ಮತ್ತು ಫಾರೂಕಿಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಉಳಿಸಿಕೊಂಡಿದ್ದವು. ಈ ಮೂವರು ಆಟಗಾರರು ಅಕ್ಟೋಬರ್- ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಗನ್‌ ತಂಡವನ್ನು ಪ್ರತಿನಿಧಿಸಿದರು. ಇದೀಗ ಅಫ್ಘಾನಿಸ್ತಾನವು ಭಾರತದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲು ಸಜ್ಜಾಗಿದೆ. ಈ ಸರಣಿಗೆ ಮುಜೀಬ್, ನವೀನ್ ಮತ್ತು ಫಾರೂಕಿ ಅವರು ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ ಎಂದು ಮಂಡಳಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.