ಹಿಂದಿನ ತಂಡಗಳಿಂದ ಆಗದ್ದನ್ನು ಸಾಧಿಸುವ ಬಯಕೆ: ರೋಹಿತ್‌ ಶರ್ಮಾ ಜೋಹಾನೆಸ್‌ಬರ್ಗ್‌ : ‘ಕಳೆದ 31 ವರ್ಷಗಳ ಅವಧಿಯಲ್ಲಿ ಭಾರತದ ಹಿಂದಿನ ತಂಡಗಳು ಮಾಡಲಾಗದ್ದನ್ನು (ದಕ್ಷಿಣ ಆಫ್ರಿಕಾದಲ್ಲಿ ಸರಣಿ ಜಯ) ಸಾಧಿಸಲು ಬಯಸಿದ್ದೇನೆ. ಆದರೆ ಅದೂ ಸಹ ಏಕದಿನ ವಿಶ್ವಕಪ್‌ ಫೈನಲ್ ಪಂದ್ಯದ ಸೋಲಿನ ಗಾಯದ ಕಲೆಯನ್ನು ಅಳಿಸಿಹಾಕದು’ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ. ‘ತಂಡವಾಗಿ ನಾವು ಎಲ್ಲಿ ನಿಂತಿದ್ದೇವೆ ಎಂಬುದನ್ನು ಸಾಧಿಸಿ ತೋರಿಸಲು ಇಂಥ ಸರಣಿಗಳು ಮಹತ್ವದ್ದು. ನಾವಿಲ್ಲಿ ಒಮ್ಮೆಯೂ ಸರಣಿ ಗೆದ್ದಿಲ್ಲ. ನಮಗೆ ಇಲ್ಲಿ ಉತ್ತಮ ಪ್ರದರ್ಶನ ನೀಡಲು ಇದೊಂದು ದೊಡ್ಡ ಅವಕಾಶ’ ಎಂದು ಮೊದಲ ಟೆಸ್ಟ್‌ಗೆ ಮುನ್ನಾದಿನವಾದ ಸೋಮವಾರ ರೋಹಿತ್ ಹೇಳಿದ್ದಾರೆ. ‘ಹಿಂದೆ ಎರಡು ಬಾರಿ ಇಲ್ಲಿಗೆ ಪ್ರವಾಸ ಕೈಗೊಂಡಾಗ ನಾವು ಸರಣಿ ಗೆಲುವಿನ ಸಮೀಪಕ್ಕೆ ಬಂದಿದ್ದೆವು. ಈ ಭಾಗದಲ್ಲಿ ಹಿಂದಿನ (ಭಾರತದ) ತಂಡಗಳು ಮಾಡದ್ದನ್ನು ಸಾಧಿಸುವ ವಿಶ್ವಾಸದೊಡನೆ ಇಲ್ಲಿಗೆ ಬಂದಿದ್ದೇವೆ’ ಎಂದಿದ್ದಾರೆ ರೋಹಿತ್. ಆದರೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆಲುವು ವಿಶ್ವಕಪ್‌ ಸೋಲಿಗೆ ಮುಲಾಮು ಆಗುವುದಿಲ್ಲ. ವಿಶ್ವಕಪ್‌ಗೆ ಅದರದೇ ಆದ ಸ್ಥಾನವಿದೆ. ಈ ಸಲ ನಾವು ಸಾಕಷ್ಟು ಪ್ರಯತ್ನ ಹಾಕಿದ್ದೇವೆ. ’ ಎಂದು ಹೇಳಿದರು. 2021ರ ಪ್ರವಾಸದಲ್ಲಿ ಸೆಂಚುರಿಯನ್‌ ಟೆಸ್ಟ್‌ ಪಂದ್ಯದಲ್ಲಿ ಶಮಿ ಅವರು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿ ಅವರು ಆಡುತ್ತಿಲ್ಲ. ‘ಇತ್ತೀಚಿನ ವರ್ಷಗಳಲ್ಲಿ ಶಮಿ ನೀಡಿದ ನಿರ್ವಹಣೆ ನೋಡಿದರೆ ತಂಡಕ್ಕೆ ಅವರ ಅನುಪಸ್ಥಿತಿ ದೊಡ್ಡದಾಗಿ ಕಾಡಲಿದೆ. ಆದರೆ ಯಾರಾದರೊಬ್ಬರು ಆ ಸ್ಥಾನದಲ್ಲಿ ಆಡಲಿದ್ದಾರೆ. ಆದರೆ ಅದು ಸುಲಭವಲ್ಲ. ಆದರೆ ನಮಗೆ ವಿಶ್ವಾಸವಿದೆ’ ಎಂದರು. ‘ಪ್ರಸಿದ್ಧ (ಕೃಷ್ಣ) ತಮ್ಮ ಎತ್ತರದಿಂದ ಪಿಚ್‌ನಲ್ಲಿ ಬೌನ್ಸ್‌ ಪಡೆಯಬಲ್ಲರು. ಮುಕೇಶ್‌ ಚೆಂಡನ್ನು ಸ್ವಿಂಗ್ ಮಾಡಬಲ್ಲರು. ಪಿಚ್‌ ನೋಡಿ ಮಂಗಳವಾರ ಬೆಳಿಗ್ಗೆ ತಂಡದ ಸ್ವರೂಪ ನಿರ್ಧ ರಿಸುತ್ತೇವೆ’ ಎಂದರು. ‘ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪಿಂಗ್‌ ಮಾಡುವುದು ತಂಡದ ಚಿಂತಕರ ಚಾವಡಿಯ ದೀರ್ಘಾವಧಿ ಯೋಜನೆ ಯಲ್ಲ. ಆದರೆ ಈ ಸರಣಿಯಲ್ಲಿ ಹೆಚ್ಚುವರಿ ಬ್ಯಾಟರ್‌ ಆಡಿ ಸಲು ಇದರಿಂದ ಅವಕಾಶವಾಗಲಿದೆ’ ಎಂದು ಹೇಳಿದರು. ‘ವಿಶ್ವಕ‍ಪ್‌ನಲ್ಲಿ ಅವರ ವಿಕೆಟ್‌ ಕೀಪಿಂಗ್‌ ಅಮೋಘವಾಗಿತ್ತು. ಅವರೂ ಆ (ವಿಕೆಟ್‌ ಕೀಪರ್‌) ಪಾತ್ರವನ್ನೂ ನಿಭಾಯಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ 5,6 ಅಥವಾ 7ನೇ ಕ್ರಮಾಂಕದಲ್ಲಿ ಪರಿಣತ ಬ್ಯಾಟರ್‌ ಆಡಲು ಅವಕಾಶವಾಗಲಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.