ಮಹಿಳಾ ಟೆಸ್ಟ್: ಭಾರತ ವನಿತೆಯರ ಐತಿಹಾಸಿಕ ವಿಜಯ ಮುಂಬೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಚಾರಿತ್ರಿಕ ಜಯ ಸಾಧಿಸಿತು. ಭಾನುವಾರ ಮುಗಿದ ಪಂದ್ಯದಲ್ಲಿ ಆತಿಥೇಯ ತಂಡವು 8 ವಿಕೆಟ್‌ಗಳಿಂದ ಜಯಿಸಿತು. ಮಹಿಳೆಯರ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಎದುರು ಜಯಿಸಿದ ಮೊದಲ ಪಂದ್ಯ ಇದಾಗಿದೆ. ಉಭಯ ತಂಡಗಳು ಇದುವರೆಗೆ 11 ಪಂದ್ಯಗಳನ್ನು ಆಡಿವೆ. ಅದರಲ್ಲಿ ಆರು ಡ್ರಾ ಆಗಿದ್ದು, ಆಸ್ಟ್ರೇಲಿಯಾ ನಾಲ್ಕರಲ್ಲಿ ಜಯಿಸಿದೆ. ಇದೀಗ ಭಾರತ ಜಯದ ಖಾತೆ ತೆರೆದಿದೆ. ಈ ಪಂದ್ಯದಲ್ಲಿ ನಾಲ್ಕು ದಿನವೂ ಛಲಬಿಡದ ಆಟವಾಡಿದ ಹರ್ಮನ್ ಬಳಗವು ಅರ್ಹ ಗೆಲುವು ಗಳಿಸಿತು. ಶನಿವಾರ ದಿನದಾಟದ ಮುಕ್ತಾಯಕ್ಕೆ ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 233 ರನ್ ಗಳಿಸಿತ್ತು. ಭಾನುವಾರ ಬೆಳಿಗ್ಗೆ ಸ್ನೇಹಾ ರಾಣಾ (5–2–9–2) ಮತ್ತು ಕನ್ನಡತಿ ರಾಜೇಶ್ವರಿ ಗಾಯಕವಾಡ್ (1.4–1–0–2) ಅವರ ದಾಳಿಯ ಮುಂದೆ ಆಸ್ಟ್ರೇಲಿಯಾ ಬ್ಯಾಟರ್‌ಗಳು ಕುಸಿದರು. 45 ನಿಮಿಷಗಳಲ್ಲಿ 29 ರನ್‌ಗಳ ಅಂತರದಲ್ಲಿ ಐದು ವಿಕೆಟ್‌ಗಳು ಪತನವಾದವು. ಅನಾಬೆಲ್ ಸದರ್ಲೆಂಡ್ (27 ರನ್) ಅವರು ತುಸು ಹೋರಾಟ ತೋರಿದರು. ಆದರೆ ಉಳಿದವರು ವಿಫಲರಾದರು. ಇದರಿಂದಾಗಿ ತಂಡವು 105.4 ಓವರ್‌ಗಳಲ್ಲಿ 261ರನ್‌ ಗಳಿಸಿ ಆಲೌಟ್ ಆಯಿತು. 75 ರನ್‌ಗಳ ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 18.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಮುಟ್ಟಿತು. ಸ್ಮೃತಿ ಮಂದಾನ (ಔಟಾಗದೆ 38) ಮತ್ತು ಜೆಮಿಮಾ (ಔಟಾಗದೆ 12) ತಂಡವನ್ನು ಗೆಲುವಿನ ದಡ ಸೇರಿಸಿದರು. ಹೋದವಾರ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಟೆಸ್ಟ್ ಗೆದ್ದು ದಾಖಲೆ ನಿರ್ಮಿಸಿತ್ತು. ಆ ಜಯದಿಂದ ಭರ್ತಿ ಆತ್ಮವಿಶ್ವಾಸದಲ್ಲಿದ್ದ ತಂಡವು ಈ ಪಂದ್ಯದಲ್ಲಿ ಅಮೋಘ ಆಟವಾಡಿತು. ‘ಮೂರನೇ ದಿನದಾಟದ ಸಂಜೆ ಹರ್ಮನ್‌ಪ್ರೀತ್ ಕೌರ್ ಬೌಲಿಂಗ್ ಮಾಡಿ ಎರಡು ವಿಕೆಟ್ ಗಳಿಸಿದ್ದು ಪಂದ್ಯದ ಜಯ ನಮ್ಮತ್ತ ವಾಲಲು ಕಾರಣವಾಯಿತು. ಅವರದ್ದು ಮ್ಯಾಜಿಕ್ ಸ್ಪೆಲ್. ಅವರು ಅರ್ಧಶತಕ ಗಳಿಸಿದ್ದ ತಹಲಿಯಾ ಮೆಕ್‌ಗ್ರಾ ಮತ್ತು 32 ರನ್ ಗಳಿಸಿದ್ದ ಅಲೀಸಾ ಹೀಲಿ ವಿಕೆಟ್ ಗಳಿಸಿದ್ದರಿಂದ ಮಹತ್ವದ ತಿರುವು ಲಭಿಸಿತು‘ ಎಂದು ಬೌಲರ್ ಸ್ನೇಹಾ ರಾಣಾ ಪಂದ್ಯದ ನಂತರ ಸುದ್ದಿಗಾರರಿಗೆ ಹೇಳಿದರು. ಎರಡನೇ ಇನಿಂಗ್ಸ್‌ನಲ್ಲಿ ಮೆಕ್‌ಗ್ರಾ ಮತ್ತು ಹೀಲಿ ಅವರು ಆಸ್ಟ್ರೇಲಿಯಾ ತಂಡವು ಮುನ್ನಡೆ ಗಳಿಸಲು ಕಾರಣರಾಗಿದ್ದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 219, ಭಾರತ: 406, ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 105.4 ಓವರ್‌ಗಳಲ್ಲಿ 261(ಸದರ್ಲ್ಯಾಂಡ್ 27, ಸ್ನೇಹಾ ರಾಣಾ 63ಕ್ಕೆ4, ರಾಜೇಶ್ವರಿ ಗಾಯಕವಾಡ್ 42ಕ್ಕೆ2, ಹರ್ಮನ್‌ಪ್ರೀತ್ ಕೌರ್ 23ಕ್ಕೆ2) ಭಾರತ: 18.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 75 (ಸ್ಮೃತಿ ಮಂದಾನ ಔಟಾಗದೆ 38, ಜೆಮಿಮಾ ರಾಡ್ರಿಗಸ್ ಔಟಾಗದೆ 12, ಕಿಮ್ ಗ್ರಾಥ್ 19ಕ್ಕೆ1, ಆ್ಯಷ್ಲೆ ಗಾರ್ಡನರ್ 18ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 8 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ಸ್ನೇಹಾ ರಾಣಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.