ಕಮಿನ್ಸ್ ದಾಳಿ: ಜಮಾಲ್ ತಿರುಗೇಟು ಸಿಡ್ನಿ: ಪಾಕಿಸ್ತಾನ ತಂಡವು ಬುಧವಾರ ಇಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ದಾಳಿಗೆ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ, ಮಧ್ಯಮ ಮತ್ತು ಕೆಳಕ್ರಮಾಂಕದ ಬ್ಯಾಟರ್‌ಗಳು ಪಾಕ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗೌರವಾರ್ಹ ಮೊತ್ತ ಗಳಿಸಲು ಕಾರಣರಾದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಆರಂಭವಾದ ಮೂರನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಪಾಕಿಸ್ತಾನ ತಂಡವು 77.1 ಓವರ್‌ಗಳಲ್ಲಿ 313 ರನ್‌ ಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕ್ ತಂಡದ ಆರಂಭಿಕ ಜೋಡಿ ಅಬ್ದುಲ್ಲಾ ಶಫೀಕ್ ಮತ್ತು ಸಯಾಮ್ ಅಯೂಬ್ ಅವರಿಬ್ಬರೂ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಇಬ್ಬರು ತಲಾ ಎರಡು ಎಸೆತ ಎದುರಿಸಿದ್ದು ವಿಶೇಷ. ಶಫೀಕ್ ಮತ್ತು ಅಯೂಬ್ ಅವರ ವಿಕೆಟ್‌ಗಳನ್ನು ಕ್ರಮವಾಗಿ ಸ್ಟಾರ್ಕ್ ಮತ್ತು ಹ್ಯಾಜಲ್‌ವುಡ್ ಗಳಿಸಿದರು. ನಂತರದ ಆಟದಲ್ಲಿ ಮಧ್ಯಮ ಕ್ರಮಾಂಕವನ್ನು ನಾಯಕ ಕಮಿನ್ಸ್ (61ಕ್ಕೆ5) ಕಾಡಿದರು. ಇದರಿಂದಾಗಿ ತಂಡವು 96 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ರಿಜ್ವಾನ್ (88; 103ಎ, 4X10, 6X2) ಮತ್ತು ಆಘಾ ಸಲ್ಮಾನ್ (53; 67ಎ, 4X8) ಆರನೇ ವಿಕೆಟ್ ಜೊತೆಯಾಟದಲ್ಲಿ 96 ರನ್‌ಗಳನ್ನು ಸೇರಿಸಿದರು. ಕಮಿನ್ಸ್ ಎಸೆತದಲ್ಲಿ ರಿಜ್ವಾನ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ರಿಜ್ವಾನ್ ಶತಕದ ಅವಕಾಶವೂ ತಪ್ಪಿತು. ಜಮಾಲ್ ಮಿಂಚಿನ ಆಟ: ಒಂಬತ್ತನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಆಮಿರ್ ಜಮಾಲ್ (82; 97ಎ, 4X9, 6X4) ಮಿಂಚಿನ ಬ್ಯಾಟಿಂಗ್ ಮಾಡಿದರು. ಅವರ ಬ್ಯಾಟಿಂಗ್‌ನಿಂದಾಗಿ ತಂಡದ ಮೊತ್ತವು ತ್ರಿಶತಕದ ಗಡಿ ದಾಟಿತು. ಆತಿಥೇಯ ತಂಡದ ವೇಗಿಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಬಲಗೈ ವೇಗದ ಬೌಲರ್ ಆಗಿರುವ ಶತಕದತ್ತ ದಾಪುಗಾಲಿಟ್ಟಿದ್ರು. ಆದರೆ 78ನೇ ಓವರ್‌ನಲ್ಲಿ ಸ್ಪಿನ್ನರ್ ನೇಥನ್ ಲಯನ್ ಅವರ ಎಸೆತದಲ್ಲಿ ಜಮಾಲ್ ಔಟಾದರು. ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ತಮ್ಮ ವೃತ್ತಿಜೀವನದ ವಿದಾಯದ ಪಂದ್ಯ ಆಡುತ್ತಿರುವ ವಾರ್ನರ್ ಆರು ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇನ್ನೊಂದು ಬದಿಯಲ್ಲಿ ಖಾತೆ ತೆರೆಯದ ಉಸ್ಮಾನ್ ಖ್ವಾಜಾ ಇದ್ದಾರೆ. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: 77.1 ಓವರ್‌ಗಳಲ್ಲಿ 313 (ಶಾನ್ ಮಸೂದ್ 35, ಬಾಬರ್ ಆಜಂ 26, ಮೊಹಮ್ಮದ್ ರಿಜ್ವಾನ್ 88, ಆಘಾ ಸಲ್ಮಾನ್ 53, ಆಮಿರ್ ಜಮಾಲ್ 82, ಮಿಚೆಲ್ ಸ್ಟಾರ್ಕ್ 75ಕ್ಕೆ2, ಪ್ಯಾಟ್ ಕಮಿನ್ಸ್ 61ಕ್ಕೆ5) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.