ನ್ಯೂಲ್ಯಾಂಡ್‌ ಪಿಚ್‌: ದಕ್ಷಿಣ ಆಫ್ರಿಕಾ ಕೋಚ್ ಅಸಮಾಧಾನ ಕೇಪ್‌ಟೌನ್: ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯವು ಒಂದೂವರೆ ದಿನದಲ್ಲಿಯೇ ಮುಗಿಯಿತು. ಇದರಿಂದಾಗಿ ಇಲ್ಲಿಯ ಪಿಚ್‌ ಬಗ್ಗೆ ಹಲವರಿಂದ ಟೀಕೆಗಳು ಕೇಳಿಬಂದಿವೆ. ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್ ಅವರೂ ಕಿಡಿ ಕಾರಿದ್ದಾರೆ. ‘ಅಗತ್ಯಕ್ಕಿಂತಲೂ ಹೆಚ್ಚು ಉತ್ತಮವಾಗಿ ಸಿದ್ಧಗೊಳಿಸಲಾದ ಪಿಚ್’ ಎಂದು ವ್ಯಂಗ್ಯವಾಡಿದ್ದಾರೆ. ‘ಜನವರು ನನ್ನಿಂದ ಏನು ಕೇಳಲು ಇಚ್ಛಿಸುತ್ತಾರೋ ಗೊತ್ತಿಲ್ಲ. ಆದರೆ ಪಂದ್ಯದ ಸ್ಕೋರ್‌ ನೋಡಿ ಮಾತ್ರ ನಾನು ಹೇಳುವುದೇನೆಂದರೆ, ಒಂದೂವರೆ ದಿನದ ಟೆಸ್ಟ್ ಪಂದ್ಯವಿದು ಎಂದಷ್ಟೇ. ಅವರು (ಭಾರತ) ಗುರಿ ಬೆನ್ನಟ್ಟಿ 80 ರನ್ ಗಳಿಸಿದ್ದು ನೋಡಿ. ಈ ಪಿಚ್‌ನಲ್ಲಿ ಕೌಶಲಕ್ಕಿಂತ ಅದೃಷ್ಟವೇ ಹೆಚ್ಚು ಬೇಕಾಗಿದ್ದು ವಿಷಾದಕರ. ಟೆಸ್ಟ್ ಕ್ರಿಕೆಟ್‌ನ ಮೌಲ್ಯಗಳು ಮತ್ತು ನೈತಿಕತೆಯನ್ನು ಗಾಳಿಗೆ ತೂರಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಇಲ್ಲಿ ನಾಲ್ಕು ಗೋಡೆಗಳ ನಡುವೆ ಏನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ಆದರೆ ಎಲ್ಲರಿಗೂ ಒಳ್ಳೆಯ ಪಿಚ್‌ ಇದಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಶುಕ್ರಿ ಅವರು ನ್ಯೂಲ್ಯಾಂಡ್ಸ್ ಕ್ರೀಡಾಂಗಣ ಇರುವ ವೆಸ್ಟರ್ನ್ ಪ್ರಾವಿನ್ಸ್‌ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ ಕುರಿತು ಹೇಳಿದರು. ‘ಇಲ್ಲಿಯ ಪಿಚ್‌ ಕ್ಯೂರೇಟರ್ ಬ್ರಾಮ್ ಮಾಂಗ್ ಅವರು ಒಳ್ಳೆಯ ವ್ಯಕ್ತಿ. ಅವರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಆದರೆ ಕೆಲವೊಮ್ಮೆ ಒಳ್ಳೆಯವರು ಕೆಟ್ಟ ಅಥವಾ ತಪ್ಪು ಸಂಗತಿಗಳನ್ನು ಮಾಡಿಬಿಡುತ್ತಾರೆ. ಈ ಒಂದು ಸಂಗತಿಯಿಂದ ಅವರನ್ನು ಕೆಟ್ಟ ಕ್ಯೂರೇಟರ್ ಎನ್ನಲಾಗದು. ಅವರು ಈ ಪಂದ್ಯದಿಂದ ಪಾಠ ಕಲಿಯಬೇಕು’ ಎಂದು ಅಭಿಪ್ರಾಯಪಟ್ಟರು. ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಏಡನ್ ಮರ್ಕರಂ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಕೆಲವು ಸಂದರ್ಭಗಳಲ್ಲಿ ಆಕ್ರಮಣಕಾರಿ ಶೈಲಿಯೇ ಉತ್ತಮ ರಕ್ಷಣೆಯೂ ಆಗುತ್ತದೆ. ಇಂತಹ ಕಠಿಣ ಸ್ಥಿತಿಯಲ್ಲಿ ಆಕ್ರಮಣಕಾರಿ ಆಡುವುದೊಂದೇ ದಾರಿಯಾಗಿರುತ್ತದೆ. ಜೊತೆಯಾಟಗಳ ನಿರ್ವಹಣೆ ಮತ್ತು ಯಾರಾದರೂ ಒಬ್ಬ ಆಟಗಾರ ಗಟ್ಟಿಯಾಗಿ ನಿಂತು ಆಡುವುದು ಮುಖ್ಯವಾಗುತ್ತದೆ’ ಎಂದರು. ರೆಫರಿಗಳ ನಿಲುವಿಗೆ ರೋಹಿತ್ ಅಸಮಾಧಾನ ‘ಇಂತಹ ಪಿಚ್‌ಗಳ ಮೇಲೆ ಆಡಲು ನಾವು ಸದಾ ಸಿದ್ಧವಾಗಿದ್ದೇವೆ. ಆದರೆ ಭಾರತದಲ್ಲಿ ಪಂದ್ಯಗಳು ನಡೆದಾಗ ಅಲ್ಲಿಯ ಪಿಚ್‌ಗಳ ಬಗ್ಗೆ ಮಾತನಾಡುವವರು ಬಾಯಿ ಮುಚ್ಚಿಕೊಂಡಿರಬೇಕು. ಅಲ್ಲಿ ಮತ್ತು ಇಲ್ಲಿ ಒಂದೇ ಅಭಿಪ್ರಾಯ ಹೊಂದಿರಬೇಕು’ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು. ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಐಸಿಸಿ ಮತ್ತು ಪಂದ್ಯ ರೆಫರಿಗಳು ಇಂತಹ ಸಂಗತಿಗಳನ್ನು ನೋಡಬೇಕು. ಪಿಚ್‌ಗಳಿಗೆ ರೇಟಿಂಗ್ ಕೋಡುವಾಗ ನೈಜ ಸಂಗತಿಯನ್ನು ನೋಡಬೇಕು. ಆತಿಥ್ಯ ವಹಿಸುವ ದೇಶವನ್ನು ನೋಡಿ ರೇಟಿಂಗ್ ಕೊಡಬಾರದು. ಇಂತಹ ಪಿಚ್‌ನಲ್ಲಿ ಆಡಿರುವುದಕ್ಕೆ ನಮಗೆ ಹೆಮ್ಮೆ ಇದೆ. ಆದರೆ ಎಲ್ಲೆಡೆಯೂ ಇಂತ ತಟಸ್ಥ ನಿಲುವು ಇರುವುದು ಮುಖ್ಯ‘ ಎಂದರು. ‘ಭಾರತದಲ್ಲಿ ಟೆಸ್ಟ್ ಪಂದ್ಯಗಳು ನಡೆದಾಗ ಪಿಚ್‌ಗಳಲ್ಲಿ ಮೊದಲ ದಿನವೇ ಚೆಂಡು ತಿರುವು ಪಡೆಯಲು ಆರಂಭಿಸುತ್ತದೆ. ಆಗ ದೂಳೆಬ್ಬಿಸುವ ಪಿಚ್ ಮೊದಲ ದಿನವೇ ಟರ್ನರ್ ಎಂಬ ಟೀಕೆಗಳ ಸುರಿಮಳೆಯೇ ಆಗುತ್ತದೆ’ ಎಂದು ರೋಹಿತ್ ಹೇಳಿದರು. ‘ಈ ಪಂದ್ಯ ನಡೆದ ಪಿಚ್‌ ಅನ್ನು ನಾವೆಲ್ಲರೂ ನೋಡಿದ್ದೇವೆ. ಇದು ಅಪಾಯಕಾರಿ ಮತ್ತು ಕಠಿಣ ಸವಾಲಿನದ್ದು’ ಎಂದು ಸಿಡಿಮಿಡಿಗೊಂಡರು. ‘ಈ ಪಿಚ್‌ಗೆ ಯಾವ ರೀತಿಯ ರೇಟಿಂಗ್ ಬರಲಿದೆ ಎಂಬುದನ್ನು ನೋಡಲು ಕಾಯುತ್ತಿದ್ದೇನೆ. ಈಗ ರೇಟಿಂಗ್ ಚಾರ್ಟ್ ನೋಡಲು ಉತ್ಸುಕನಾಗಿದ್ದೇನೆ. ಮುಂಬೈ ಬೆಂಗಳೂರು ಕೇಪ್‌ ಟೌನ್ ಮತ್ತು ಸೆಂಚುರಿಯನ್ ಪಿಚ್‌ಗಳು ಬೇರೆ ಬೇರೆಯೇ. ಪಿಚ್‌ಗಳು ವೇಗವಾಗಿ ಕ್ಷೀಣಗೊಳ್ಳುವುವುದು ಹವಾಮಾನ ವೈಪರಿತ್ಯಗಳು ಬೇರೆ. ಮೊದಲ ಎಸೆತದಿಂದಲೇ ಚೆಂಡಿನ ಸೀಮ್ ಚಲನೆಗೊಂಡರೂ ತಪ್ಪಿಲ್ಲ. ಆದರೆ ಇನಿಂಗ್ಸ್ ಆರಂಭದಲ್ಲಿ ಚೆಂಡು ಸ್ಪಿನ್‌ ಆಗತೊಡಗಿದರೆ ಸರಿಯಲ್ಲ ಎಂಬುದು ಅವರ ಧೋರಣೆ. ಚೆಂಡು ಸ್ಪಿನ್ ಆಗಬಾರದು ಬರೀ ಸ್ವಿಂಗ್ ಆಗಬೇಕು ಎಂದು ಬಯಸುವುದಾದರೆ ತಪ್ಪು’ ಎಂದು ರೋಹಿತ್ ಹೇಳಿದರು. ‘ನಾನು ಬಹಳಷ್ಟು ಕ್ರಿಕೆಟ್ ನೋಡಿದ್ದೇನೆ. ರೆಫರಿಗಳು ಯಾವ ರೀತಿ ರೇಟಿಂಗ್‌ ನೀಡುತ್ತಾರೆಂಬುದನ್ನೂ ಕಂಡಿದ್ದೇನೆ. ಅದರ ಬಗ್ಗೆ ನನಗೇನೂ ತಕರಾರಿಲ್ಲ. ಆದರೆ ಅವರು ತಟಸ್ಥ ನೀತಿ ಅನುಸರಿಸಬೇಕು’ ಎಂದು ಹೇಳಿದರು. ಈ ಟೆಸ್ಟ್ ಪಂದ್ಯಕ್ಕೆ ಅನುಭವಿ ಕ್ರಿಸ್‌ ಬ್ರಾಡ್ ಅವರು ರೆಫರಿಯಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.