| ಮಯಂಕ್‌ ಪಡೆಗೆ ಶುಭಾರಂಭದ ವಿಶ್ವಾಸ ಹುಬ್ಬಳ್ಳಿ: ಕರ್ನಾಟಕ ತಂಡ, ಶುಕ್ರವಾರ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿ ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದ್ದು, ಗೆಲುವಿನೊಂದಿಗೆ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಗುಜರಾತ್‌, ತಮಿಳುನಾಡು, ರೈಲ್ವೇಸ್‌ ಮೊದಲಾದ ಪ್ರಬಲ ತಂಡಗಳಿರುವ ಗುಂಪಿನಲ್ಲಿ ಉತ್ತಮ ಆರಂಭ ಪಡೆಯುವ ದೃಷ್ಟಿಯಿಂದ, ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯ ಮಹತ್ವದ್ದು. 2014–15ರ ನಂತರ ರಾಜ್ಯ ತಂಡ ದೇಶೀಯ ಕ್ರಿಕೆಟ್‌ ಸಾರ್ವಭೌಮ ತಂಡವನ್ನು ನಿರ್ಧರಿಸುವ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿಲ್ಲ. ಹೆಚ್ಚಿನ ಸಲ ನಾಕೌಟ್‌ ಹಂತಗಳಲ್ಲಿ ಎಡವಿದೆ. ಕಳೆದ ವರ್ಷ ಸೆಮಿಫೈನಲ್‌ ಪಂದ್ಯದಲ್ಲಿ ಸೌರಾಷ್ಟ್ರ ಎದುರು ಸೋತಿತ್ತು. ಕಳೆದ ಋತುವಿನಲ್ಲಿ ಕರ್ನಾಟಕ ತವರಿನಲ್ಲಿ ಆಡಿದ ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದವು. ಈ ವರ್ಷ ಎರಡು ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯುತ್ತಿವೆ. 2013-14ರಲ್ಲಿ ಇಲ್ಲಿಯೇ ಕರ್ನಾಟಕ ಮತ್ತು ಪಂಜಾಬ್‌ ತಂಡಗಳು ಮುಖಾಮುಖಿಯಾಗಿದ್ದವು. ರಾಜ್ಯ ತಂಡ ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿದೆ. ಅನುಭವಿಗಳಾದ ಮಯಂಕ್ ಅಗರ್‌ವಾಲ್‌, ಆರ್‌.ಸಮರ್ಥ್‌, ಮನಿಷ್ ಪಾಂಡೆ ಅವರು ಕಳೆದ ರಣಜಿ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ ಮಯಂಕ್ 990 ರನ್ ಕಲೆಹಾಕಿದ್ದರು. ನಿಕಿನ್ ಜೋಸ್‌ ಕೂಡ ಪದಾರ್ಪಣೆ ವರ್ಷ ಯಶಸ್ಸು ಕಂಡಿದ್ದರು. ಅನುಭವಿ ದೇವದತ್ತ ಪಡಿಕ್ಕಲ್ ಅವರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್ ಮತ್ತು ವೈಶಾಖ ವಿಜಯಕುಮಾರ್ ಅವರನ್ನು ಹೊಂದಿರುವ ವೇಗದ ಬೌಲಿಂಗ್ ವಿಭಾಗ ಪ್ರಬಲವಾಗಿದೆ. ಆದರೆ ಸ್ಪಿನ್‌ ವಿಭಾಗ ಹೊಸಬರನ್ನು ಅವಲಂಬಿಸಿದೆ. ಲೆಗ್‌ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಈ ಸಾಲಿನಲ್ಲಿ ಕೇರಳ ತಂಡಕ್ಕೆ ವಲಸೆಹೋಗಿದ್ದಾರೆ. ಅನುಭವಿ ಕೆ.ಗೌತಮ್ ಆಯ್ಕೆಯಾಗಿಲ್ಲ. ಹೀಗಾಗಿ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗಡೆ ಜತೆಗೆ ಸ್ಥಳೀಯ ಪ್ರತಿಭೆ ಎಡಗೈ ಸ್ಪಿನ್ನರ್ ಎ.ಸಿ. ರೋಹಿತ್ ಕುಮಾರ್ ಮತ್ತು ಕಲಬುರಗಿಯ ಆಫ್‌ಸ್ಪಿನ್ನರ್ ಕೆ. ಶಶಿಕುಮಾರ್ ಅವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಇದೆ. ತಟಸ್ಥ ಕ್ಯುರೇಟರ್‌ ಇಲ್ಲಿನ ಪಿಚ್‌ ಸಿದ್ಧಪಡಿಸಿದ್ದು, ಸ್ಪರ್ಧಾತ್ಮಕವಾಗಿರುವುದರಿಂದ ರಾಜ್ಯ ತಂಡ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಬದಲಾವಣೆ ಸಹಜ: ‘ತಂಡದಲ್ಲಿ ಬದಲಾವಣೆ ಸಹಜ. ಅನುಭವಿ ಬ್ಯಾಟರ್, ಬೌಲರ್‌ಗಳು ತಂಡದಲ್ಲಿದ್ದಾರೆ. ಉತ್ತಮ ತಂಡವನ್ನು ಸಜ್ಜುಗೊಳಿಸಲಾಗಿದೆ’ ಎಂದು ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಸುದ್ದಿಗಾರರಿಗೆ ತಿಳಿಸಿದರು. ಇಬ್ಬರು ಯುವ ಸ್ಪಿನ್ನರ್‌ಗಳು ತಂಡದಲ್ಲಿ ಸ್ಥಾನ ಪಡೆದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘23 ವರ್ಷದೊಳಗಿನವರ ಟೂರ್ನಿಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರಿಂದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರಿಗೆ ಇದು ಉತ್ತಮ ಅವಕಾಶ. ನಾನು ಸಕಾರಾತ್ಮಕವಾಗಿ ಯೋಚಿಸುತ್ತೇನೆ. ಹೊಸಬರ ಮೇಲೆ ವಿಶ್ವಾಸ ಇದೆ’ ಎಂದು ಹೇಳಿದರು. ‘ಪಂಜಾಬ್ ತಂಡ ಸಹ ಉತ್ತಮವಾಗಿದೆ‌. ಅವರು ಕಳೆದ ವರ್ಷ ಕ್ವಾರ್ಟರ್ ಫೈನಲ್ ತಲುಪಿದ್ದರು. ಅವರನ್ನು ಲಘುವಾಗಿ ಪರಿಗಣಿಸುವುದಿಲ್ಲ’ ಎಂದರು. ಈ ತಂಡದಲ್ಲಿ ಮನದೀಪ್ ಸಿಂಗ್‌, ಅನ್ಮೋಲ್‌ಪ್ರೀತ್ ಸಿಂಗ್ ಮೊದಲಾದ ಅನುಭವಿ ಬ್ಯಾಟರ್‌ಗಳಿದ್ದಾರೆ. ನೇಹಲ್ ವಧೇರಾ ಅವರಂಥ ಯುವ ಪ್ರತಿಭೆ ಸಹ ತಂಡದಲ್ಲಿದ್ದಾರೆ. ಭಾರತ ತಂಡದಲ್ಲಿ ಆಡಿರುವ ಅರ್ಷದೀಪ್ ಸಿಂಗ್ ಜೊತೆಗೆ ಸಿದ್ಧಾರ್ಥ ಕೌಲ್ ಅವರಿಂದ ವೇಗದ ಬೌಲಿಂಗ್ ವಿಭಾಗವೂ ಬಲಹೊಂದಿದೆ. ಕರ್ನಾಟಕ ತಂಡ: ಮಯಂಕ್ ಅಗರವಾಲ್‌ (ನಾಯಕ), ಆರ್.ಸಮರ್ಥ್‌, ದೇವದತ್ತ ಪಡಿಕ್ಕಲ್‌, ನಿಕಿನ್ ಜೋಸ್‌ ಎಸ್‌.ಜೆ (ಉಪನಾಯಕ), ಮನೀಷ್ ಪಾಂಡೆ, ಶುಭಾಂಗ್ ಹೆಗಡೆ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್‌), ವೈಶಾಖ ವಿಜಯಕುಮಾರ್‌, ವಿ.ಕೌಶಿಕ್‌, ವಿದ್ವತ್ ಕಾವೇರಪ್ಪ, ಕೆ.ಶಶಿಕುಮಾರ್, ಸುಜಯ್ ಸಾತೇರಿ (ವಿಕೆಟ್‌ಕೀಪರ್), ಡಿ.ನಿಶ್ಚಲ್‌, ಎಂ.ವೆಂಕಟೇಶ್, ಕಿಶನ್ ಎಸ್.ಬೆದರೆ, ಎ.ಸಿ.ರೋಹಿತ್‌ಕುಮಾರ್‌. ಪಂಜಾಬ್ ತಂಡ: ಮನದೀಪ್ ಸಿಂಗ್ (ನಾಯಕ), ಅಭಿಷೇಕ್ ಶರ್ಮಾ, ಅಭಿನವ್‌ ಶರ್ಮಾ, ನಮನ್‌ ಧೀರ್‌, ಪ್ರೇರಿತ್ ದತ್ತಾ, ನೇಹಲ್ ವಧೇರಾ, ಬಲ್ಜಿತ್ ಸಿಂಗ್, ಅರ್ಷದೀಪ್ ಸಿಂಗ್, ಸಿದ್ಧಾರ್ಥ ಕೌಲ್‌, ಜಸ್ಸಿಂದರ್ ಸಿಂಗ್, ಗೀತಾನ್ಶ್ ಖೇರಾ, ವಿಶ್ವನಾಥ್ ಪ್ರತಾಪ್ ಸಿಂಗ್, ಪ್ರಭಸಿಮ್ರಾನ್ ಸಿಂಗ್ (ವಿಕೆಟ್‌ ಕೀಪರ್), ಮಯಂಕ್ ಮಾರ್ಕಂಡೆ, ಸೋಮವಿರ್ ಸಿಂಗ್. ಪಂದ್ಯದ ಆರಂಭ: ಬೆಳಿಗ್ಗೆ 9.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.