ಪ್ರಸಿದ್ಧ ಕೃಷ್ಣಗೆ ಟೆಸ್ಟ್ ಮಾದರಿಯಲ್ಲಿ ಯಶಸ್ವಿಯಾಗಬಲ್ಲ ಕೌಶಲ್ಯವಿದೆ: ರೋಹಿತ್‌ ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು, ವೇಗಿ ಪ್ರಸಿದ್ಧ ಕೃಷ್ಣ ಅವರ ಸಾಮರ್ಥ್ಯವನ್ನು ಹಾಡಿ ಹೊಗಳಿದ್ದಾರೆ. ಕೃಷ್ಣ ಅವರು ಟೆಸ್ಟ್ ಮಾದರಿಯಲ್ಲಿ ಯಶಸ್ವಿಯಾಗಬಲ್ಲ ಕೌಶಲ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇಂದಿನಿಂದ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಆರಂಭವಾಗಲಿದ್ದು, ಮೊದಲ ಪಂದ್ಯ ಸೋತಿರುವ ಭಾರತ ತಂಡವು, ಈ ಕೊನೆಯ ಪಂದ್ಯ ಗೆದ್ದು ಸರಣಿಯನ್ನು ಡ್ರಾ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಪ್ರಸ್ತುತ ತಂಡದ ಬೌಲಿಂಗ್ ಅನನುಭವಿಯಾಗಿದೆ ಎಂಬುದನ್ನು ಒಪ್ಪಿಕೊಂಡರು. ಆದರೆ, ನಮ್ಮ ಬೌಲಿಂಗ್ ತಂಡ ಯಶಸ್ಸು ಕಾಣಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ‘ಕೆಲವೊಮ್ಮೆ ನಮ್ಮ ಬೌಲಿಂಗ್‌ ಪಡೆಯು ಅನನುಭವದಿಂದ ಕೂಡಿದೆ ಎಂದು ನನಗೆ ಅನಿಸುತ್ತದೆ. ಅಂತಹ ಸಂದರ್ಭದಲ್ಲಿ ನಾವು ಅವರ ಮೇಲೆ ಸ್ವಲ್ಪ ನಂಬಿಕೆಯನ್ನು ಇಡಬೇಕು. ನಂಬಿಕೆ ವ್ಯಕ್ತಪಡಿಸಿದರೆ ಅವರು ಸಫಲರಾಗಬಹುದು. ಕಳೆದ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಪ್ರಸಿದ್ಧ ಕೃಷ್ಣ ಆಟದ ಬಗ್ಗೆ ನಾನು ಹೇಳಿದ್ದೆ. ಯಾವುದೇ ಒಬ್ಬ ಆಟಗಾರ ಮೊದಲ ಪಂದ್ಯವನ್ನು ಆಡುವಾಗ ನಮಗೆ ಕೊಂಚ ಆತಂಕವಿರುತ್ತದೆ. ಪ್ರಸಿದ್ಧ ಕೃಷ್ಣ ಅವರು, ಟೆಸ್ಟ್ ಕ್ರಿಕೆಟ್‌ನಲ್ಲಿ ಸಫಲವಾಗಲು ಬೇಕಾದ ಉತ್ತಮ ಕೌಶಲ್ಯ ಹೊಂದಿದ್ದಾರೆ. ನಾವು ಅವರ ಮೇಲೆ ನಂಬಿಕೆ ಇೇಬೇಕು. ಆಗ ಯಶಸ್ಸು ಸಾಧ್ಯ’ ಎಂದು ಹೇಳಿದರು. ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತ್ತು. ರಬಾಡ ಅವರ ಐದು ವಿಕೆಟ್ ಗೊಂಚಲು ಪಡೆದಿದ್ದು, ಭಾರತಕ್ಕೆ ಹಿನ್ನಡೆಯಾಗಿತ್ತು. ಕೆ.ಎಲ್. ರಾಹುಲ್ 101 ರನ್‌ಗಳ ಆಟವು ಡೀನ್ ಎಲ್ಗರ್ ಅವರ 185 ರನ್‌ಗಳ ಮುಂದೆ ಮಂಕಾಯಿತು ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.