: ಮೊದಲ ಟಿ20– ಅಫ್ಗಾನಿಸ್ತಾನ ವಿರುದ್ಧ ಭಾರತಕ್ಕೆ ಜಯ ಮೊಹಾಲಿ (ಪಿಟಿಐ): ಅಜೇಯ ಅರ್ಧಶತಕ ಗಳಿಸಿದ ಶಿವಂ ದುಬೆ ಬ್ಯಾಟಿಂಗ್‌ನಿಂದ ಭಾರತ ತಂಡವು ಅಫ್ಗಾನಿಸ್ತಾನ ಎದುರಿನ ಮೊದಲ ಟಿ20 ಸರಣಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಜಯಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಲಾ ಎರಡು ವಿಕೆಟ್ ಗಳಿಸಿದ ಮುಕೇಶ್ ಕುಮಾರ್ ಮತ್ತು ಅಕ್ಷರ್ ಪಟೇಲ್ ಅವರ ದಾಳಿಯ ಮುಂದೆ ಅಫ್ಗನ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 158 ರನ್ ಗಳಿಸಿತು. ಭಾರತ ತಂಡವು ಶಿವಂ (ಔಟಾಗದೇ 60, 40ಎ, 4X5, 6X2) ಬ್ಯಾಟಿಂಗ್ ಬಲದಿಂದ 17.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 159 ರನ್‌ ಗಳಿಸಿ ಗೆದ್ದಿತು. ಗುರಿ ಬೆನ್ನಟ್ಟಿದ ಆತಿಥೇಯರಿಗೆ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಆಘಾತ ಎದುರಾಯಿತು. ನಾಯಕ ರೋಹಿತ್ ಶರ್ಮಾ ಖಾತೆ ತೆರೆಯುವ ಮುನ್ನವೇ ರನ್‌ಔಟ್ ಆಗಿ ನಿರ್ಗಮಿಸಿದರು. ನಾಲ್ಕನೇ ಓವರ್‌ನಲ್ಲಿ ಶುಭಮನ್ ಗಿಲ್ ಅವರೂ ಔಟಾದರು. ಕ್ರೀಸ್‌ನಲ್ಲಿದ್ದ ತಿಲಕ್ ವರ್ಮಾ ಅವರೊಂದಿಗೆ ಸೇರಿಸಿಕೊಂಡ ದುಬೆ ಇನಿಂಗ್ಸ್‌ಗೆ ಬಲ ತುಂಬಿದರು. ಇವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 44 ರನ್‌ ಸೇರಿಸಿದರು. ಒಂಬತ್ತನೇ ಓವರ್‌ನಲ್ಲಿ ತಿಲಕ್ ವರ್ಮಾ ವಿಕೆಟ್ ಕಬಳಿಸಿದ ಅಜ್ಮತ್‌ವುಲ್ಲಾ ಅವರು ಈ ಜೊತೆಯಾಟವನ್ನು ಮುರಿದರು. ಕ್ರೀಸ್‌ಗೆ ಬಂದ ಯುವಪ್ರತಿಭೆ ಜಿತೇಶ್ ಶರ್ಮಾ (31, 20ಎ, 4X5) ಶಿವಂ ಜೊತೆಗೂಡಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 45 ರನ್‌ ಸೇರಿಸಿದರು. ಮುಜೀಬ್ ಎಸೆತದಲ್ಲಿ ಶರ್ಮಾ ಔಟಾದರು. ಕ್ರೀಸ್‌ಗೆ ಬಂದ ರಿಂಕು ಸಿಂಗ್ ವಿಕೆಟ್ ಪತನ ತಡೆದರು. ದುಬೆಯೊಂದಿಗೆ ಸೇರಿ ತಂಡವನ್ನು ಜಯದ ದಡ ಸೇರಿಸಿದರು. ಅಫ್ಗನ್ ತಂಡದಲ್ಲಿ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅವರ ಗೈರುಹಾಜರಿ ಕಾಡಿತು. ಮುಜೀಬ್ ಉರ್ ರೆಹಮಾನ್ (21ಕ್ಕೆ2) ಅವರು ಭಾರತದ ಬ್ಯಾಟರ್‌ಗಳಿಗೆ ತುಸು ಕಠಿಣ ಸವಾಲೊಡ್ಡಿದರು. ಆದರೆ ಪ್ರವಾಸಿ ತಂಡದ ಬ್ಯಾಟರ್‌ಗಳು ಭಾರತದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಮೊಹಮ್ಮದ್ ನಬಿ 27 ಎಸೆತಗಳಲ್ಲಿ 42 ರನ್ ಗಳಿಸಿದರು. ಅವರು ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ಗಳಿಸಿದರು. ಇದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಿತು. ಸಂಕ್ಷಿಪ್ತ ಸ್ಕೋರು ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 158 (ರೆಹಮಾನುಲ್ಲಾ ಗುರ್ಬಾಜ್ 23, ಇಬ್ರಾಹಿಂ ಝದ್ರಾನ್ 25, ಅಜ್ಮತ್‌ವುಲ್ಲಾ 29, ಮೊಹಮ್ಮದ್ ನಬಿ 42, ನಜೀಬುಲ್ಲಾ ಔಟಾಗದೆ 19, ಮುಕೇಶ್ ಕುಮಾರ್ 33ಕ್ಕೆ2, ಅಕ್ಷರ್ ಪಟೇಲ್ 23ಕ್ಕೆ2) ಭಾರತ: 17.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 159 (ಶುಭಮನ್ ಗಿಲ್ 23, ತಿಲಕ್ ವರ್ಮಾ 26, ಶಿವಂ ದುಬೆ ಔಟಾಗದೆ 60, ಜಿತೇಶ್ ಶರ್ಮಾ 31, ರಿಂಕು ಸಿಂಗ್ ಔಟಾಗದೆ 16, ಮುಜೀಬ್ ಉರ್ ರೆಹಮಾನ್ 21ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 6 ವಿಕೆಟ್‌ಗಳ ಜಯ. 1–0ಯಿಂದ ಸರಣಿ ಮುನ್ನಡೆ. ಪಂದ್ಯಶ್ರೇಷ್ಠ: ಶಿವಂ ದುಬೆ. ಗಿಲ್ ಮೇಲೆ ಸಿಟ್ಟಿಗೆದ್ದ ರೋಹಿತ್ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ನಾಯಕ ರೋಹಿತ್ ಶರ್ಮಾ ಅವರ ಕೆಂಗಣ್ಣಿಗೆ ಗುರಿಯಾದರು. ಗುರಿ ಬೆನ್ನಟ್ಟಿದ ಭಾರತದ ಇನಿಂಗ್ಸ್‌ನ ಮೊದಲ ಓವರ್‌ ಹಾಕಿದ ಫಜಲ್‌ಹಕ್ ಫರೂಕಿ ಅವರ ಎರಡನೇ ಎಸೆತವನ್ನು ರೋಹಿತ್ ಮಿಡ್‌ ಆಫ್‌ನತ್ತ ಆಡಿದರು. ಒಂದು ರನ್‌ಗಾಗಿ ಓಡಿದರು. ಆದರೆ ಇನ್ನೊಂದು ತುದಿಯಲ್ಲಿದ್ದ ಶುಭಮನ್ ಚೆಂಡನ್ನು ಹಿಡಿತಕ್ಕೆ ಪಡೆದಿದ್ದ ಮಿಡ್‌ ಆಫ್‌ ಫೀಲ್ಡರ್ ಅತ್ತ ನೋಡುತ್ತ ರೋಹಿತ್ ಅವರಿಗೆ ಬೇಡ ಎಂದು ಕೈತೋರಿಸಿದರು. ಆದರೆ ಅಷ್ಟೊತ್ತಿಗೆ ರೋಹಿತ್ ನಾನ್‌ಸ್ಟ್ರೈಕರ್‌ ಕ್ರೀಸ್‌ಗೆ ಬಂದಾಗಿತ್ತು. ಈ ಅವಕಾಶ ಬಳಸಿಕೊಂಡ ಅಫ್ಗಾನಿಸ್ತಾನ ರೋಹಿತ್ ಅವರನ್ನು ರನ್‌ ಔಟ್ ಮಾಡಿತು. ಇದರಿಂದ ಕುಪಿತರಾದ ರೋಹಿತ್ ಅವರು ಗಿಲ್ ಅವರನ್ನು ಬೈಯುತ್ತ ಹೊರನಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.