ಸಿ.ಕೆ.‌‌ ನಾಯ್ದು ಟ್ರೋಫಿ ಕ್ರಿಕೆಟ್‌: ಚೇತರಿಸಿದ ಹೈದರಾಬಾದ್‌ ತಂಡ ಮೈಸೂರು: ಆತಿಥೇಯ ಕರ್ನಾಟಕ ತಂಡವು ಭಾನುವಾರ ಇಲ್ಲಿ ಆರಂಭವಾದ ಸಿ.ಕೆ.‌‌ ನಾಯ್ದು ಟ್ರೋಫಿ 23 ವರ್ಷದ ಒಳಗಿನವರ ಕ್ರಿಕೆಟ್ ಟೂರ್ನಿಯ ಟೆಸ್ಟ್ ಪಂದ್ಯದ ಮೊದಲ ದಿನ ಹೈದರಾಬಾದ್‌ಗೆ ಆರಂಭಿಕ ಆಘಾತ ನೀಡಿತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪ್ರವಾಸಿ ತಂಡವನ್ನು ಸಂಕಷ್ಟದಿಂದ ಮೇಲೆತ್ತಿದರು. ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಬೆಳಿಗ್ಗೆ ಟಾಸ್ ಗೆದ್ದ ಕರ್ನಾಟಕವು ಎದುರಾಳಿಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು.‌ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲ್ ಮಾಡಿದ ಕರ್ನಾಟಕದ ಬೌಲರ್‌ಗಳು ಎದುರಾಳಿ ತಂಡವನ್ನು ಕಾಡಿದರು. ಹೈದರಾಬಾದ್ ತಂಡ ಕೇವಲ 16 ರನ್‌ ಗಳಿಸುವಷ್ಟರಲ್ಲೇ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೈಸೂರಿನ ವೇಗಿ ಎಲ್‌. ಮನ್ವಂತ್ ಕುಮಾರ್ ಎದುರಾಳಿಗಳನ್ನು ಕಂಗೆಡಿಸಿದರು. 15 ಓವರ್‌ ಬೌಲ್‌ ಮಾಡಿದ ಅವರು 3 ವಿಕೆಟ್ ಉರುಳಿಸಿ ಗಮನ ಸೆಳೆದರು. ಸ್ಪಿನ್ನರ್‌ ಕೆ. ಶಶಿಕುಮಾರ್ 2 ಹಾಗೂ ಯಶೋವರ್ಧನ್ 1 ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್‌: ಹೈದರಾಬಾದ್‌: 81 ಓವರ್‌ಗಳಲ್ಲಿ 223ಕ್ಕೆ 6 ( ಇಲ್ಯಾನ್ ಸಥಾನಿ ಔಟಾಗದೇ 94, ಸಿಟಿಎಲ್‌ ರಕ್ಷಣ್ ಔಟಾಗದೇ 36. ಎಲ್‌. ಮನ್ವಂತ್‌ ಕುಮಾರ್ 46ಕ್ಕೆ 3, ಕೆ.ಶಶಿಕುಮಾರ್ 73ಕ್ಕೆ 2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.