ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ತಲೆಗೆ ಚೆಂಡು ಬಡಿದು ವ್ಯಕ್ತಿ ಸಾವು! ಮುಂಬೈ: ಇಲ್ಲಿನ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರ ತಲೆಗೆ ಚೆಂಡು ಬಡಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಟುಂಗಾ ಪ್ರದೇಶದ ದಾಡ್ಕರ್ ಕ್ರಿಕೆಟ್ ಮೈದಾನದಲ್ಲಿ ಏಕಕಾಲಕ್ಕೆ ಎರಡು ಪಂದ್ಯಗಳು ನಡೆಯುತ್ತಿದ್ದವು. ಜಯೇಶ್ ಸಾವ್ಲಾ ಅವರು ತನ್ನ ತಂಡಕ್ಕಾಗಿ ಫೀಲ್ಡಿಂಗ್ ಮಾಡುತ್ತಿದ್ದರು. ಇದೇ ವೇಳೆ ಮತ್ತೊಂದು ಪಂದ್ಯದಲ್ಲಿ ಬ್ಯಾಟರ್‌ ಹೊಡೆದ ಚೆಂಡು ಸಾವ್ಲಾ ಅವರ ತಲೆಯ ಹಿಂಭಾಗಕ್ಕೆ ಬಡಿಯಿತು ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ತಲೆಗೆ ಪೆಟ್ಟಾಗಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಸಾವ್ಲಾ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಮಾಟುಂಗಾ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.