19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಟೂರ್ನಿ ಇಂದಿನಿಂದ ಬ್ಲೂಮ್‌ಫಾಂಟೇನ್, ದಕ್ಷಿಣ ಆಫ್ರಿಕಾ: ಭವಿಷ್ಯದ ಕ್ರಿಕೆಟ್ ತಾರೆಗಳಾಗಿ ಹೊರಹೊಮ್ಮುವ ಕನಸು ಕಾಣುತ್ತಿರುವ ಯುವ ಆಟಗಾರರು ಶುಕ್ರವಾರ ಆರಂಭವಾಗಲಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಭಾರತವು ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಸಲ ಅಂದರೆ; ಐದು ಬಾರಿ ಚಾಂಪಿಯನ್ ಆಗಿದೆ. ಈ ಟೂರ್ನಿಯಲ್ಲಿ ಆಡಿ ಗಮನ ಸೆಳೆದ ಅನೇಕರು ರಾಷ್ಟ್ರೀಯ ತಂಡದಲ್ಲಿ ಮಿಂಚಿ ಖ್ಯಾತನಾಮರಾಗಿದ್ದಾರೆ. ಯುವರಾಜ್ ಸಿಂಗ್ (2000), ರೋಹಿತ್ ಶರ್ಮಾ (2006), ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ (2008), ರಿಷಭ್ ಪಂತ್ ಮತ್ತು ಇಶಾನ್ ಕಿಶನ್ (2016) ಹಾಗೂ ಶುಭಮನ್ ಗಿಲ್ (2018) ಅದರಲ್ಲಿ ಪ್ರಮುಖರು. ಇವರಲ್ಲದೇ ರವಿಕಾಂತ್ ಶುಕ್ಲಾ, ಮನೀಷ್ ಪಾಂಡೆ, ಉನ್ಮುಕ್ತ್ ಚಾಂದ್, ಯಶ್ ಧುಳ್, ಮನ್ಜೋತ್ ಕಾಲ್ರಾ ಹಾಗೂ ಕಮಲೇಶ್ ನಾಗರಕೋಟಿ ಕೂಡ ದೇಶದ ತಂಡವನ್ನು ಪ್ರತಿನಿಧಿಸುವ ಮುನ್ನ 19 ವರ್ಷದೊಳಗಿನ ವಿಭಾಗದಿಂದ ಗಮನ ಸೆಳೆದವರು. ಈ ಬಾರಿ ಒಟ್ಟು 16 ತಂಡಗಳು ಕಣದಲ್ಲಿವೆ. ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯಲಿವೆ. ಈ ಹಂತದಲ್ಲಿ ಎರಡು ವಿಭಾಗಗಳಲ್ಲಿ ತಲಾ ಆರು ತಂಡಗಳು ಆಡಲಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಏಕದಿನ ಮಾದರಿ ಈ ಟೂರ್ನಿಯಲ್ಲಿ ತಂಡವನ್ನು ಪಂಜಾಬ್‌ ರಾಜ್ಯದ ಉದಯ ಸಹರಾನ್ ಮುನ್ನಡೆಸಲಿದ್ದಾರೆ. ಭಾರತ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶನಿವಾರ ಬಾಂಗ್ಲಾದೇಶದ ಎದುರು ಮೊದಲ ಪಂದ್ಯ ಆಡಲಿದೆ. ಈ ಬಾರಿಯ ಐಪಿಎಲ್‌ಗೆ ಅಯ್ಕೆಯಾಗಿರುವ ಅರಷಿಣ್ ಕುಲಕರ್ಣಿ, ಕೂಚ್ ಬಿಹಾರ್ ಟ್ರೋಫಿಯಲ್ಲಿ ಉತ್ತಮವಾಗಿ ಆಡಿದ್ದ ಮುಷೀರ್ ಖಾನ್, ಅರವೆಳ್ಳಿ ಅವನೀಶ್, ರಾಜ್ ಲಿಂಬಾನಿ ಉಪನಯಕ ಸೌಮ್ಯಾ ಪಾಂಡೆ ಅವರು ತಂಡದಲ್ಲಿದ್ದಾರೆ. ಈಚೆಗೆ ನಡೆದಿದ್ದ ಏಷ್ಯಾ ಕಪ್ ಟೂರ್ನಿಯಲ್ಲಿ ಉದಯ್ ಬಳಗವು ಸೆಮಿಫೈನಲ್ ಹಂತದಲ್ಲಿ ಸೋತಿತ್ತು. ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಭಾರತವು ಜಂಟಿ ಚಾಂಪಿಯನ್ ಆಗಿತ್ತು. ಇದೇ ಗುಂಪಿನಲ್ಲಿ ಅಮೆರಿಕ ಮತ್ತು ಐರ್ಲೆಂಡ್ ತಂಡಗಳು ಇವೆ. ನ್ಯೂಜಿಲೆಂಡ್ ತಂಡದ ಬೌಲರ್ ರೆಹಮಾನ್ ಹೆಕ್ಮತ್, ಪಾಕಿಸ್ತಾನದ ವೇಗಿ ಉಬೇದ್ ಶಾ, ಅಫ್ಗಾನಿಸ್ತಾನದ ಆಫ್‌ಸ್ಪಿನ್ನರ್ ಅಲ್ಲಾಹ್ ಮೊಹಮ್ಮದ್ ಘಜನಫರ್ ಮತ್ತು ಇಂಗ್ಲೆಂಡ್ ಲೂಕ್ ಬೆಂಕೆನ್‌ಸ್ಟೀನ್ ಅವರ ಮೇಲೂ ಭರವಸೆಯ ನೋಟ ನೆಟ್ಟಿದೆ. ಭಾರತ ಬಿಟ್ಟರೆ ಆಸ್ಟ್ರೇಲಿಯಾ ಮೂರು ಸಲ ಹಾಗೂ ಪಾಕಿಸ್ತಾನ ಎರಡು ಸಲ ಟ್ರೋಫಿ ಜಯಿಸಿದೆ. ಹೋದ ಸಲ ಬಾಂಗ್ಲಾ ಗೆದ್ದಿತ್ತು. ದಕ್ಷಿಣ ಆಫ್ರಿಕಾ , ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಂದು ಬಾರಿ ಜಯಿಸಿವೆ. ಬೆನೊನಿಯಲ್ಲಿ ಫೆಬ್ರುವರಿ 6 ಮತ್ತು 8ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಇಲ್ಲಿಯೇ 11ರಂದು ಬೆನೊನಿಯಲ್ಲಿ ಫೈನಲ್ ಆಯೋಜಿಸಲಾಗಿದೆ. ಇಂದಿನ ಪಂದ್ಯಗಳು ಐರ್ಲೆಂಡ್–ಅಮೆರಿಕ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.