ಎರಡನೇ ಟೆಸ್ಟ್‌: ಆಸ್ಟ್ರೇಲಿಯಾ ಬಿಗಿ ಹಿಡಿತ ಆಡಿಲೇಡ್‌, ಆಸ್ಟ್ರೇಲಿಯಾ: ವೇಗದ ಬೌಲರ್ ಜೋಶ್‌ ಹ್ಯಾಜಲ್‌ವುಡ್‌ ಅವರ ಸ್ಫೂರ್ತಿಯುತ ಸ್ಪೆಲ್‌ ಹಾಗೂ ಟ್ರಾವಿಸ್‌ ಹೆಡ್‌ ಅವರ ಬಿರುಸಿನ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಕ್ರಿಕೆಟ್‌ ಟೆಸ್ಟ್‌ನ ಎರಡನೆ ದಿನವಾದ ಗುರುವಾರ ವೆಸ್ಟ್ ಇಂಡೀಸ್ ವಿರುದ್ಧ ಬಿಗಿ ಹಿಡಿತ ಸಾಧಿಸಿತು. ಹೆಡ್‌ 134 ಎಸೆತಗಳಲ್ಲಿ 119 ರನ್‌ ಬಾರಿಸಿ, ಆಸ್ಟ್ರೇಲಿಯಾ ತಂಡ 283 ರನ್‌ಗಳ ಉತ್ತಮ ಮೊತ್ತ ತಲುಪಲು ನೆರವಾದರು. ಆ ಮೂಲಕ ಆತಿಥೇಯರು 95 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಸಂಪಾದಿಸಿದರು. ದಿನದಾಟ ಮುಗಿದಾಗ ಪ್ರವಾಸಿ ವೆಸ್ಟ್ ಇಂಡೀಸ್‌ 73 ರನ್‌ಗಳಾಗುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಪರದಾಡುತ್ತಿದೆ. ಆಸ್ಟ್ರೇಲಿಯಾ ಮತ್ತೆ ಬ್ಯಾಟ್‌ ಮಾಡಬೇಕಾದರೆ ಅದು ಇನ್ನೂ 22 ರನ್ ಬಾಕಿ ತೀರಿಸಬೇಕಾಗಿದೆ. ವೆಸ್ಟ್‌ ಇಂಡೀಸ್‌ ಇನಿಂಗ್ಸ್‌ನ ಆರಂಭದಲ್ಲಿ ಅಮೋಘ ಸೀಮ್ ಬೌಲಿಂಗ್ ಪ್ರದರ್ಶನ ನೀಡಿದ ಹ್ಯಾಜಲ್‌ವುಡ್‌ ಕೇವಲ ಎರಡು ರನ್ನಿಗೆ 4 ವಿಕೆಟ್‌ ‍ಪ‍ಡೆದು ಎದುರಾಳಿ ತಂಡಕ್ಕೆ ಬಲವಾದ ಪೆಟ್ಟುಕೊಟ್ಟರು. ಜೋಶುವ ಡ ಸಿಲ್ವ 17 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಜಸ್ಟಿನ್ ಗ್ರೀವ್ಸ್‌ ದಿನದ ಕೊನೆಯ ಎಸೆತದಲ್ಲಿ ಔಟ್‌ ಆದರು. ಅವರು ತೇಜನಾರಾಯಣ ಚಂದರಪಾಲ್ ಅವರನ್ನು ಮೊದಲ ಎಸೆತದಲ್ಲೇ ಔಟ್‌ ಮಾಡಿದರು. ನಂತರದ ಓವರ್‌ನಲ್ಲಿ ನಾಯಕ ಕ್ರೇಗ್ ಬ್ರಾತ್‌ವೇಟ್‌ ಅವರ ವಿಕೆಟ್‌ ಗಳಿಸಿದರು. ಅವರು ಶಾರ್ಟ್‌ ಲೆಗ್‌ ಹಿಂದೆ ಹೆಡ್‌ಗೆ ಕ್ಯಾಚ್‌ ನೀಡಿದರು. ಅಲಿಕ್‌ ಅಥನೇಜ್ ಅವರು ಬೌನ್ಸರ್‌ ಒಂದನ್ನು ವಿಕೆಟ್‌ ಕೀಪರ್‌ ಕಡೆ ಆಡಿದಾಗ ಸ್ಕೋರ್‌ 7ಕ್ಕೆ3. ಕವೆಮ್‌ ಹೊಜ್ ಅವರು ಎರಡನೇ ಸ್ಲಿಪ್‌ನಲ್ಲಿ ಸ್ಟೀವ್‌ ಸ್ಮಿತ್‌ಗೆ ಕ್ಯಾಚ್‌ ಕೊಟ್ಟಾಗ ತಂಡ 19 ರನ್ ಮಾಡಿತ್ತಷ್ಟೇ. ಕಿರ್ಕ್ ಮೆಕೆಂಝಿ ಮತ್ತು ಗ್ರೀವ್ಸ್‌ ಕೆಲಕಾಲ ಕುಸಿತ ತಡೆದರು. ನಥಾನ್ ಲಯನ್ ನಂತರ ಗ್ರೀವ್ಸ್‌ (24) ವಿಕೆಟ್‌ ಗಳಿಸಿದರು. ‘ತಮ್ಮ ಯುವ ತಂಡ ಆಸ್ಟ್ರೇಲಿಯಾದ ಪರಿಸ್ಥಿತಿಗೆ ತಂಡ ಒಗ್ಗಿಸಿಕೊಳ್ಳಬೇಕಾಗಿದೆ’ ಎಂದು ವೆಸ್ಟ್‌ ಇಂಡೀಸ್‌ ಕೋಚ್‌ ಆಂಡ್ರೆ ಕೋಲಿ ತಿಳಿಸಿದರು. ಇದಕ್ಕೆ ಮೊದಲು ಹೆಡ್‌ ಟೆಸ್ಟ್‌ನಲ್ಲಿ ತಮ್ಮ ಏಳನೇ ಶತಕ ಗಳಿಸಿ, ಆಸ್ಟ್ರೇಲಿಯಾ ತಂಡ ಗಮನಾರ್ಹ ಮುನ್ನಡೆ ಪಡೆಯಲು ನೆರವಾದರು. ಮೊದಲ ಪಂದ್ಯ ಆಡುತ್ತಿರುವ ಶಮರ್‌ ಜೋಸೆಫ್‌ 94 ರನ್ನಿಗೆ 5 ವಿಕೆಟ್‌ ಪಡೆದು ಗಮನ ಸೆಳೆದರು. ಸ್ಕೋರುಗಳು: ಒಂದನೇ ಇನಿಂಗ್ಸ್‌: ವೆಸ್ಟ್‌ ಇಂಡೀಸ್‌: 188, ಆಸ್ಟ್ರೇಲಿಯಾ: 81.1 ಓವರುಗಳಲ್ಲಿ 283 (ಉಸ್ಮಾನ್‌ ಕ್ವಾಜಾ 45, ಟ್ರಾವಿಸ್‌ ಹೆಡ್‌ 119, ನಥಾನ್ ಲಯನ್‌ 24; ಕೇಮರ್‌ ರೋಚ್‌ 48ಕ್ಕೆ2, ಶಮರ್ ಜೋಸೆಫ್‌ 94ಕ್ಕೆ5); ಎರಡನೇ ಇನಿಂಗ್ಸ್‌: ವೆಸ್ಟ್ ಇಂಡೀಸ್: 22.5 ಓವರುಗಳಲ್ಲಿ 6 ವಿಕೆಟ್‌ಗೆ 73 (ಕಿರ್ಕ್ ಮೆಕೆಂಝಿ 26, ಜಸ್ಟಿನ್ ಗ್ರೀವ್ಸ್‌ 24; ಹ್ಯಾಜಲ್‌ವುಡ್‌ 18ಕ್ಕೆ4). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.