ಟಿ20 ವಿಶ್ವಕಪ್‌ ತಂಡ ರಚನೆಗೆ ಉತ್ತಮ ಆಯ್ಕೆಗಳಿವೆ: ಕೋಚ್ ರಾಹುಲ್ ದ್ರಾವಿಡ್ ಸಂತಸ ಬೆಂಗಳೂರು: ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಕ್ಕೆ ಆಯ್ಕೆ ಮಾಡಲು ಪ್ರತಿಭಾನ್ವಿತ ಆಟಗಾರರ ದಂಡು ನಮ್ಮ ಮುಂದಿದೆ. ಇದು ಆಶಾದಾಯಕ ಬೆಳಣಿಗೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಬುಧವಾರ ಮುಕ್ತಾಯವಾದ ಅಫ್ಗಾನಿಸ್ತಾನ ಎದುರಿನ ಟಿ20 ಸರಣಿಯಲ್ಲಿ ಆತಿಥೇಯ ತಂಡವು 3–0ಯಿಂದ ಗೆದ್ದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಏಕದಿನ ವಿಶ್ವಕಪ್ ಟೂರ್ನಿ ಮುಗಿದ ನಂತರ ನಡೆದ ಟಿ20 ಟೂರ್ನಿಗಳಲ್ಲಿ ಹಲವು ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದು ಉತ್ತಮ ಫಲ ನೀಡಿದೆ. ಒಂದಷ್ಟು ಉತ್ತಮ ಆಟಗಾರರು ಬೆಳಕಿಗೆ ಬಂದಿದ್ದಾರೆ. ಅವಕಾಶ ಪಡೆದ ಆಟಗಾರರು ತಮ್ಮ ಕೌಶಲಗಳನ್ನು ಪ್ರದರ್ಶಿಸಿದ್ದಾರೆ’ ಎಂದು ದ್ರಾವಿಡ್ ಹೇಳಿದರು. ‘ಕೆಲವು ವಿಭಾಗಗಳಲ್ಲಿ ಒಂದಿಷ್ಟು ಸುಧಾರಣೆಗಳ ಅಗತ್ಯವಿರುವುದು ಹೌದು. ಆ ಕುರಿತು ನಾವು ಕಾರ್ಯೋನ್ಮುಖರಾಗಿದ್ದೇವೆ’ ಎಂದರು. ವಿಶ್ವಕಪ್ ಟೂರ್ನಿಗೆ ಸಿದ್ಧವಾಗಲು ತಂಡಕ್ಕೆ ಸಮಯದ ಕುರಿತು ಮಾತನಾಡಿದ ಅವರು, ‘ಭಾರತ ತಂಡವು ವಿಶ್ವಕಪ್ ಟೂರ್ನಿಗೂ ಮುನ್ನ ಆಡಲು ಹೆಚ್ಚು ಪಂದ್ಯಗಳು ಉಳಿದಿಲ್ಲ. ಆದರೆ ಐಪಿಎಲ್ ಮಾತ್ರ ಇದೆ. ಅದರಲ್ಲಿ ತಂಡದ ಆಟಗಾರರು ಬೇರೆ ಬೇರೆ ಫ್ರ್ಯಾಂಚೈಸಿಗಳಲ್ಲಿ ಆಡುತ್ತಾರೆ. ಅವರ ಮೇಲೆ ಎಲ್ಲರೂ ಗಮನ ಇಟ್ಟಿರುತ್ತಾರೆ’ ಎಂದು ಹೇಳಿದರು. ಏಕದಿನ ವಿಶ್ವಕಪ್ ಟೂರ್ನಿಯ ನಂತರ ಭಾರತ ತಂಡವು 11 ಟಿ20 ಪಂದ್ಯಗಳನ್ನು ಆಡಿದೆ. ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಮತ್ತು ಆಲ್‌ರೌಂಡರ್ ಶಿವಂ ದುಬೆ ಅವರಿಂದ ಹೆಚ್ಚಿನ ನಿರೀಕ್ಷೆ ಮೂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ಸೂಪರ್ ಓವರ್‌ ನಡೆದ ನಂತರ ಫಲಿತಾಂಶ ಬಂದ ಅಫ್ಗಾನಿಸ್ತಾನ ವಿರುದ್ಧದ ಟಿ20 ಪಂದ್ಯದ ಬಗ್ಗೆ ಪ್ರತ್ರಿಕ್ರಿಯಿಸಿದರು. ಎರಡನೇ ಸೂಪರ್‌ ಓವರ್‌ನಲ್ಲಿ 11 ರನ್‌ಗಳ ಗುರಿಯನ್ನು ಭಾರತವು ಅಫ್ಗನ್ ಪಡೆಗೆ ನೀಡಿತ್ತು. ಆ ಓವರ್‌ ಬೌಲಿಂಗ್ ಮಾಡಲು ಸ್ಪಿನ್ನರ್ ರವಿ ಬಿಷ್ಣೋಯಿಗೆ ಅವಕಾಶ ಕೊಟ್ಟಿದ್ದನ್ನು ಅವರು ಸಮರ್ಥಿಸಿಕೊಂಡರು. ‘ರೋಹಿತ್ ಅವರು ದೃಢವಿಶ್ವಾಸದಿಂದ ಬಿಷ್ಣೋಯಿಗೆ ಬೌಲಿಂಗ್ ಮಾಡಲು ಅವಕಾಶ ಕೊಟ್ಟರು. ಅದರು ರೋಹಿತ್ ನಿರ್ಧಾರವಾಗಿತ್ತು. ಪಿಚ್‌ನಲ್ಲಿ ಸ್ಪಿನ್ನರ್‌ಗೆ ವಿಕೆಟ್ ಪಡೆಯಲು ಉತ್ತಮ ಅವಕಾಶ ಇದೆ ಎಂದು ನನಗೂ ಅನಿಸಿತ್ತು. ರವಿ ಬ್ಯಾಕ್ ಆಫ್ ಲೆಂಗ್ತ್ ಬೌಲಿಂಗ್ ಮಾಡಿದರು. ಇದರಿಂದಾಗಿ ಚೆಂಡು ತುಸು ಫುಲ್ಲರ್ ಆಗಿತ್ತು. ಅದನ್ನು ಬ್ಯಾಟರ್ ಸಿಕ್ಸರ್‌ಗೆತ್ತುವ ಸಾಧ್ಯತೆ ಇತ್ತು. ಒಟ್ಟಿನಲ್ಲಿ ರೋಹಿತ್ ಆತ್ಮವಿಶ್ವಾಸವು ಕೆಲಸ ಮಾಡಿತು. ರಕ್ಷಣಾತ್ಮಕ ವಲಯದಲ್ಲಿರುವುದಕ್ಕಿಂತ ಆಕ್ರಮಣಶೀಲರಾಗುವುದು ಉತ್ತಮ‘ ಎಂದರು. ರೋಹಿತ್ ಗಾಯಗೊಂಡು ನಿವೃತ್ತಿ ಬುಧವಾರ ರಾತ್ರಿ ಅಫ್ಗನ್ ವಿರುದ್ಧದ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಮೊದಲ ಸೂಪರ್ ಓವರ್‌ನಲ್ಲಿ ಭಾರತದ ಗೆಲುವಿಗೆ ಎರಡು ರನ್‌ಗಳ ಅಗತ್ಯವಿದ್ದಾಗ ನಾಯಕ ರೋಹಿತ್ ಶರ್ಮಾ ಗಾಯಗೊಂಡು ನಿವೃತ್ತಿಯಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಮೊದಲ ಸೂಪರ್ ಓವರ್‌ನಲ್ಲಿ 16 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಗೆಲ್ಲಲು ಕೊನೆಯ ಎಸೆತದಲ್ಲಿ ಎರಡು ರನ್‌ಗಳ ಅಗತ್ಯವಿತ್ತು. ಆದರೆ ರೋಹಿತ್ ಕ್ವಿಕ್ ರನ್ ಪಡೆಯಲು ಆಗುವುದಿಲ್ಲವೆಂಬ ಕಾರಣಕ್ಕೆ ಗಾಯಗೊಂಡು ನಿವೃತ್ತರಾಗಿ ಹೊರನಡೆದರು. ರಿಂಕು ಸಿಂಗ್ ಕ್ರೀಸ್‌ಗೆ ಬಂದರು. ಆದರೆ ಈ ಓವರ್‌ ಕೂಡ ಸಮಬಲ ಗೊಂಡಿತು. ಎರಡನೇ ಸೂಪರ್ ಓವರ್‌ ಆರಂಭವಾದಾಗ ರೋಹಿತ್ ಮತ್ತೆ ಆಡಿದರು. ಇದು ನಿಯಮಕ್ಕೆ ವಿರುದ್ಧವೇ ಎಂಬ ಚರ್ಚೆ ನಡೆಯಿತು. ‘ಈ ರೀತಿ ಗಾಯಗೊಂಡು ನಿವೃತ್ತಿ ಎಂದು ನಿರ್ಗಮಿಸಿದ ಆಟಗಾರ ಮತ್ತೆ ಕ್ರೀಸ್‌ಗೆ ಎದುರಾಳಿ ತಂಡದ ನಾಯಕ ಅಥವಾ ಕೋಚ್ ಸಹಮ ವ್ಯಕ್ತಪಡಿಸಿದರೆ ಆಡಲು ಅವಕಾಶವಿದೆ‘ ಎಂದು ತಾಂತ್ರಿಕ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ರೋಹಿತ್ ಅವರ ಈ ನಿರ್ಧಾರವನ್ನು ಕೋಚ್ ದ್ರಾವಿಡ್ ಶ್ಲಾಘಿಸಿದರು. ‘ಇದು ಆ್ಯಷ್ ಲೆವೆಲ್ ಯೋಚನೆ. ರೋಹಿತ್ ಅವರು ಪಂದ್ಯದಲ್ಲಿ ತಂಡಕ್ಕೆ ಇರುವ ಅಗತ್ಯವನ್ನು ಚುರುಕಾಗಿ ಗುರುತಿಸಿ ನಿರ್ಧಾರ ತೆಗೆದುಕೊಂಡರು’ ಎಂದರು. ಎರಡು ವರ್ಷಗಳ ಹಿಂದೆ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಣ ಪಂದ್ಯದಲ್ಲಿ ಆರ್. ಅಶ್ವಿನ್ (ಆ್ಯಷ್) ಇಂತಹದೇ ತಂತ್ರ ಹೂಡಿದ್ದನ್ನು ದ್ರಾವಿಡ್ ನೆನಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.