ಭಾರತ–ಅಫ್ಗಾನಿಸ್ತಾನ ಎರಡನೇ ಟಿ20: ಮರಳಿದ ಕೊಹ್ಲಿ, ಯುವ ಆಟಗಾರರಿಗೆ ವೇದಿಕೆ ಇಂದೋರ್: ಅಫ್ಗಾನಿಸ್ತಾನ ವಿರುದ್ಧ ಸರಣಿ ಜಯ ಭಾರತದ ಪಾಲಿಗೆ ದೊಡ್ಡ ಕ್ರಿಕೆಟ್‌ ಸಾಧನೆಯಾಗಿ ದಾಖಲಾಗದು. ಆದರೆ ಕೆಲವು ಯುವ ಪ್ರತಿಭಾನ್ವಿತ ಆಟಗಾರರು ವಿಶ್ವಕಪ್‌ ದೃಷ್ಟಿಯಲ್ಲಿಟ್ಟುಕೊಂಡು ಈ ಸರಣಿಯನ್ನು ವೇದಿಕೆಯನ್ನಾಗಿ ಬಳಸಲು ಕಾತರದಿಂದ ಇದ್ದಾರೆ. ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಭಾನುವಾರ ಇಲ್ಲಿ ನಡೆಯಲಿದೆ. ಮೊಹಾಲಿಯಲ್ಲಿ ಮೊದಲ ಪಂದ್ಯ ಗೆದ್ದ ಭಾರತ 1–0 ಮುನ್ನಡೆ ಪಡೆದಿದೆ. ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ, ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್‌, ಅಕ್ಷರ್‌ ಪಟೇಲ್ ಅವರು ಆಯ್ಕೆಗಾರರ ಗಮನ ಸೆಳೆದು ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುವುದಂತೂ ಖಚಿತ. ಜೂನ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಮೊದಲು ಈ ಸರಣಿ ಬಿಟ್ಟರೆ, ಭಾರತ ತಂಡಕ್ಕೆ ಯಾವುದೇ ಟಿ20 ಸರಣಿ ಇಲ್ಲದ ಕಾರಣ ಉಳಿದ ಸರಣಿಯ ಎರಡು ಟಿ20 ಪಂದ್ಯಗಳು ಇಂಥ ಆಟಗಾರರ ಪಾಲಿಗೆ ಮಹತ್ವದ್ದು. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಅವಕಾಶ ಪಡೆದ ನಂತರ ಜೀತೇಶ್‌ ಶರ್ಮಾ, ಇಶಾನ್ ಕಿಶನ್ ಅವರನ್ನು ಹಿಂದಕ್ಕೆ ಹಾಕಿದ್ದು ವಿಕೆಟ್ ಕೀಪರ್ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಕೆಲ ಇನಿಂಗ್ಸ್‌ಗಳಲ್ಲಿ ಕೆಳಕ್ರಮಾಂಕದಲ್ಲಿ 30ರ ಆಜೂಬಾಜಿನಲ್ಲಿ ರನ್‌ಗಳನ್ನು ಹೊಡೆದರೂ, ದೊಡ್ಡ ಇನಿಂಗ್ಸ್‌ ಆಡಿ ತಮ್ಮ ಸ್ಥಾನ ಗಟ್ಟಿಗೊಳಿಸುವ ಇರಾದೆಯಲ್ಲಿದ್ದಾರೆ. 30 ವರ್ಷದ ಅವರಿಗೆ ಇದಕ್ಕಿಂತ ಒಳ್ಳೆಯ ಅವಕಾಶ ಸಿಗಲಿಕ್ಕಿಲ್ಲ. ತಿಲಕ್ ವರ್ಮಾ ಅವರದೂ ಇದೇ ಸ್ಥಿತಿ. ವೆಸ್ಟ್‌ ಇಂಡೀಸ್‌ ವಿರುದ್ಧ ಕೆರಿಬಿಯನ್‌ನಲ್ಲಿ 39, 51 ಮತ್ತು ಅಜೇಯ 49 ರನ್ ಹೊಡೆದು ಭರ್ಜರಿ ಆರಂಭ ಪಡೆದರೂ, ನಂತರ ಅದೇ ಲಯ ಕಾಯ್ದುಕೊಳ್ಳಲಿಲ್ಲ. 21 ವರ್ಷದ ಆಟಗಾರ ನಂತರದ 13 ಇನಿಂಗ್ಸ್‌ಗಳಲ್ಲಿ ಒಂದು ಅರ್ಧ ಶತಕ ಮಾತ್ರ ಗಳಿಸಿದ್ದಾರೆ. ಗಾಯಾಳಾಗಿ ವಿಶ್ವಕಪ್‌ ತಂಡದಿಂದ ಹೊರಬಿದ್ದಿದ್ದ ಅಕ್ಷರ್ ಪಟೇಲ್ ತಂಡಕ್ಕೆ ಮರಳುವ ಯತ್ನದಲ್ಲಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಗೆ ಶುಕ್ರವಾರ ರಾತ್ರಿ ಪ್ರಕಟಿಸಿದ ಭಾರತ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಮೊಹಾಲಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿ ತಮ್ಮ ಆಯ್ಕೆ ಸಮರ್ಥಿಸಿದ್ದಾರೆ. ವಾಷಿಂಗ್ಟನ್ ಸುಂದರ್ ತಂಡಕ್ಕೆ ಮರಳಿದರೂ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿಲ್ಲ. ಆದರೆ ಅಫ್ಗಾನಿಸ್ತಾನ ತಂಡವನ್ನು ಸುಲಭವಾಗಿ ಕಡೆಗಣಿಸಲಾಗದು. ಅನಿರೀಕ್ಷಿತವಾಗಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದೆ. ಯುವ ಆಟಗಾರ ರಹಮಾನುಲ್ಲಾ ಗುರ್ಬಾಝ್, ಅಜ್ಮತ್‌ಉಲ್ಲಾ ಒಮರ್‌ಝೈ ಮತ್ತು ಅನುಭವಿ ಮೊಹಮ್ಮದ್ ನಬಿ ಯಾವುದೇ ಬೌಲಿಂಗ್ ದಾಳಿ ಎದುರಿಸುವ ತಾಕತ್ತಿರುವವರು. ತಂಡಗಳು ಇಂತಿವೆ: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್ (ಇಬ್ಬರೂ ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್‌, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಆವೇಶ್ ಖಾನ್ ಮತ್ತು ಮುಕೇಶ್ ಕುಮಾರ್. ಅಫ್ಗಾನಿಸ್ತಾನ: ಇಬ್ರಾಹೀಂ ಜರ್ದಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಕ್ರಮ್ ಅಲಿಖಿಲ್ (ವಿಕೆಟ್‌ ಕೀಪರ್), ಹಜ್ರತ್‌ಉಲ್ಲಾ ಜಝೈ, ರಹಮತ್ ಶಾ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನತ್, ಅಜ್ಮತ್‌ಉಲ್ಲಾ ಒಮರ್‌ಝೈ, ಶರ್ಫುದ್ದೀನ್ ಅಶ್ರಫ್‌, ಮುಜಿಬ್ ಉರ್ ರಹಮಾನ್, ಫಜ್ಲುಲ್ಲಾ ಫಾರೂಕಿ, ಫರೀದ್ ಅಹ್ಮದ್, ನವೀನ್ ಉಲ್ ಹಕ್, ನೂರ್‌ ಅಹ್ಮದ್, ಗುಲ್ಬದೀನ್ ನೈಬ್. ಪಂದ್ಯ ಆರಂಭ: ರಾತ್ರಿ 7. ನೇರ ಪ್ರಸಾರ: ಸ್ಪೋರ್ಟ್‌ 18 ಮತ್ತು ಜಿಯೊ ಸಿನಿಮಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.