ರೋಹಿತ್ ಗಾಯಗೊಂಡು ನಿವೃತ್ತಿಯ ಸುತ್ತ ಭಾರಿ ಚರ್ಚೆ ಬೆಂಗಳೂರು: ಬುಧವಾರ ರಾತ್ರಿ ಅಫ್ಗನ್ ವಿರುದ್ಧದ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಮೊದಲ ಸೂಪರ್ ಓವರ್‌ನಲ್ಲಿ ಭಾರತದ ಗೆಲುವಿಗೆ ಎರಡು ರನ್‌ಗಳ ಅಗತ್ಯವಿದ್ದಾಗ ನಾಯಕ ರೋಃಹಿತ್ ಶರ್ಮಾ ಗಾಯಗೊಂಡು ನಿವೃತ್ತಿಯಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಮೊದಲ ಸೂಪರ್ ಓವರ್‌ನಲ್ಲಿ 16 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಗೆಲ್ಲಲು ಕೊನೆಯ ಎಸೆತದಲ್ಲಿ ಎರಡು ರನ್‌ಗಳ ಅಗತ್ಯವಿತ್ತು. ಆದರೆ ರೋಹಿತ್ ಕ್ವಿಕ್ ರನ್ ಪಡೆಯಲು ಆಗುವುದಿಲ್ಲವೆಂಬ ಕಾರಣಕ್ಕೆ ಗಾಯಗೊಂಡು ನಿವೃತ್ತರಾಗಿ ಹೊರನಡೆದರು. ರಿಂಕು ಸಿಂಗ್ ಕ್ರೀಸ್‌ಗೆ ಬಂದರು. ಆದರೆ ಈ ಓವರ್‌ ಕೂಡ ಸಮಬಲ ಗೊಂಡಿತು. ಎರಡನೇ ಸೂಪರ್ ಓವರ್‌ ಆರಂಭವಾದಾಗ ರೋಹಿತ್ ಮತ್ತೆ ಆಡಿದರು. ಇದು ನಿಯಮಕ್ಕೆ ವಿರುದ್ಧವೇ ಎಂಬ ಚರ್ಚೆ ನಡೆಯಿತು. ‘ಈ ರೀತಿ ಗಾಯಗೊಂಡು ನಿವೃತ್ತಿ ಎಂದು ನಿರ್ಗಮಿಸಿದ ಆಟಗಾರ ಮತ್ತೆ ಕ್ರೀಸ್‌ಗೆ ಎದುರಾಳಿ ತಂಡದ ನಾಯಕ ಅಥವಾ ಕೋಚ್ ಸಹಮ ವ್ಯಕ್ತಪಡಿಸಿದರೆ ಆಡಲು ಅವಕಾಶವಿದೆ‘ ಎಂದು ತಾಂತ್ರಿಕ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ರೋಹಿತ್ ಅವರ ಈ ನಿರ್ಧಾರವನ್ನು ಕೋಚ್ ದ್ರಾವಿಡ್ ಶ್ಲಾಘಿಸಿದರು. ‘ಇದು ಆ್ಯಷ್ ಲೆವೆಲ್ ಯೋಚನೆ. ರೋಹಿತ್ ಅವರು ಪಂದ್ಯದಲ್ಲಿ ತಂಡಕ್ಕೆ ಇರುವ ಅಗತ್ಯವನ್ನು ಚುರುಕಾಗಿ ಗುರುತಿಸಿ ನಿರ್ಧಾರ ತೆಗೆದುಕೊಂಡರು’ ಎಂದರು. ಎರಡು ವರ್ಷಗಳ ಹಿಂದೆ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಣ ಪಂದ್ಯದಲ್ಲಿ ಆರ್. ಅಶ್ವಿನ್ (ಆ್ಯಷ್) ಇಂತಹದೇ ತಂತ್ರ ಹೂಡಿದ್ದನ್ನು ದ್ರಾವಿಡ್ ನೆನಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.