ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯ; ಕರ್ನಾಟಕ ಗೆಲುವಿಗೆ ಮುಳ್ಳಾದ ಸುಯಶ್‌ ಮೈಸೂರು: ಇನಿಂಗ್ಸ್ ಮುನ್ನಡೆಯೊಂದಿಗೆ ಪಂದ್ಯ ಗೆಲ್ಲುವ ಕರ್ನಾಟಕದ ಕನಸಿಗೆ ಸೋಮವಾರ ಗೋವಾದ ಬ್ಯಾಟರ್‌ ಸುಯಶ್‌ ಪ್ರಭುದೇಸಾಯಿ ಅಜೇಯ ಶತಕದ (143*, 289 ಎ, 4X11) ಮೂಲಕ ಮುಳ್ಳಾದರು. ಇದರಿಂದಾಗಿ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಆತಿಥೇಯ ತಂಡ ಮೂರು ಅಂಕಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಕೊನೆಯ ದಿನ, ಪ್ರವಾಸಿ ತಂಡದ 9 ವಿಕೆಟ್‌ಗಳನ್ನು ಬೇಗ ಉರುಳಿಸಿ, ಗುರಿ ಬೆನ್ನತ್ತುವ ಕನಸಿನೊಂದಿಗೆ ದಾಳಿಗೆ ಇಳಿದ ಕರ್ನಾಟಕದ ಲೆಕ್ಕಾಚಾರ ಕೈಕೊಟ್ಟಿತು. ದಿನವಿಡೀ ಆಡಿದ ಸುಯಶ್, ಬೌಲರ್‌ಗಳನ್ನು ವಿಶ್ವಾಸದಿಂದ ಎದುರಿಸಿದರು. ಪಂದ್ಯ ಕೊನೆಗೊಂಡಾಗ ಗೋವಾ ತಂಡ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 282 ರನ್‌ ಗಳಿಸಿತ್ತು. ಭಾನುವಾರ ಅಜೇಯರಾಗಿ ಉಳಿದಿದ್ದ ಸಿದ್ಧಾರ್ಥ್‌– ಸುಯಶ್‌ ಜೋಡಿಯನ್ನು ಸೋಮವಾರ ಆರಂಭದಲ್ಲೇ ಮಧ್ಯಮ ವೇಗಿ ವೈಶಾಖ ವಿಜಯಕುಮಾರ್‌ ಬೇರ್ಪಡಿಸಿದರು. ಸಿದ್ಧಾರ್ಥ್‌ (57) ನಿನ್ನೆಯ ಮೊತ್ತಕ್ಕೆ ಒಂದು ರನ್ ಸಹ ಸೇರಿಸದೇ ದೇವದತ್ತ ಪಡಿಕ್ಕಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ನಂತರ ಸ್ನೇಹಲ್‌ ಕೌತಣಕರ್‌ ಅವರನ್ನು (8) ವೇಗಿ ವೆಂಕಟೇಶ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಆದರೆ, ನಾಲ್ಕನೇ ವಿಕೆಟ್‌ಗೆ ಜೊತೆಯಾದ ಸುಯಶ್‌– ದೀಪ್‌ರಾಜ್‌ ಜೋಡಿ ರಕ್ಷಣಾತ್ಮಕ ಆಟದ ಮೂಲಕ ಕರ್ನಾಟಕ ಬೌಲರ್‌ಗಳ ಬೆವರಿಳಿಸಿತು. 246 ಎಸೆತಗಳಲ್ಲಿ 97 ರನ್‌ ಸೇರಿಸುವ ಮೂಲಕ ತಂಡಕ್ಕೆ ಮುನ್ನಡೆ ದೊರಕಿಸಿತು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ದೀಪ್‌ರಾಜ್‌ (36, 134 ಎ, 4X1, 6X1) ಸ್ಪಿನ್ನರ್ ರೋಹಿತ್‌ ಎಸೆತದಲ್ಲಿ ಕೀಪರ್ ಶರತ್‌ ಶ್ರೀನಿವಾಸ್‌ಗೆ ಕ್ಯಾಚಿತ್ತರು. 96ನೇ ಓವರ್‌ನಲ್ಲಿ ಶುಭಾಂಗ್‌ ಎಸೆತದಲ್ಲಿ ಅರ್ಜುನ್‌ ತೆಂಡೂಲ್ಕರ್‌ (6) ಬಾರಿಸಿದ ಚೆಂಡನ್ನು ಮೊದಲ ಸ್ಲಿಪ್‌ನಲ್ಲಿದ್ದ ದೇವದತ್ತ ಪಡಿಕ್ಕಲ್ ಗಾಳಿಯಲ್ಲಿ ಹಾರಿ ಹಿಡಿಯುವ ಮೂಲಕ ಔಟ್ ಮಾಡಿದರು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಧೃತಿಗೆಡದ ಸುಯಶ್‌ ತಂಡವನ್ನು ಸೋಲಿನಿಂದ ಪಾರು ಮಾಡಿದರು. 219 ಎಸೆತಗಳಲ್ಲಿ ಶತಕ ಬಾರಿಸಿದ ಅವರು ನಂತರವೂ ವಿಕೆಟ್‌ ಕಾಪಾಡಿಕೊಳ್ಳುವತ್ತ ಚಿತ್ತ ಹರಿಸಿದರು. ಕರ್ನಾಟಕದ ನಾಯಕ ಮಯಂಕ್‌ ಆಗಾಗ್ಗೆ ಬೌಲರ್‌ಗಳನ್ನು ಬದಲಿಸಿ ವಿಕೆಟ್‌ಗಾಗಿ ಪ್ರಯತ್ನಿಸಿದ್ದು, ಫಲ ನೀಡಲಿಲ್ಲ. ಟೂರ್ನಿಯಲ್ಲಿ ಎಲೈಟ್ ಸಿ ಗುಂಪಿನಲ್ಲಿ ಆಡುತ್ತಿರುವ ಕರ್ನಾಟಕವು ಈ ಪಂದ್ಯದ ನಂತರ ಒಟ್ಟು ಮೂರು ಪಂದ್ಯಗಳಿಂದ 9 ಅಂಕ ಸಂಪಾದಿಸಿದ್ದು, ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಇದೇ 26ರಂದು ತ್ರಿಪುರ ವಿರುದ್ಧ ಮುಂದಿನ ಪಂದ್ಯವನ್ನು ಅಗರ್ತಲಾದಲ್ಲಿ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.