19 ವರ್ಷದೊಳಗಿನವರ ವಿಶ್ವಕಪ್: ಉತ್ಸಾಹಿ ಭಾರತಕ್ಕೆ ಕಿವೀಸ್ ಸವಾಲು ಬ್ಲೊಮ್‌ಫೊಂಟೀನ್ (ದಕ್ಷಿಣ ಆಫ್ರಿಕಾ): ಸತತ ಮೂರು ಲೀಗ್ ಪಂದ್ಯಗಳನ್ನು ಗೆದ್ದು ಭಾರತ ತಂಡ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಉತ್ತಮ ಆರಂಭ ಮಾಡಿದೆ. ಈಗ ಇದೇ ಹುಮ್ಮಸ್ಸಿನೊಡನೆ ಮಂಗಳವಾರ ನಡೆಯುವ ಸೂಪರ್‌ ಸಿಕ್ಸ್‌ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್‌ ಲೀಗ್‌ಗೆ ಅರ್ಹತೆ ಪಡೆದಿರುವ ಭಾರತ, ಮನುಗುವಾಂಗ್ ಓವಲ್‌ನಲ್ಲೇ ಈ ಪಂದ್ಯ ಆಡುವ ಅನುಕೂಲ ಹೊಂದಿದೆ. ಭಾರತ ಇಲ್ಲಿಯೇ ತನ್ನ ಲೀಗ್‌ ಪಂದ್ಯಗಳನ್ನು ಆಡಿತ್ತು. ಈಸ್ಟ್‌ ಲಂಡನ್‌ನಲ್ಲಿ ಆಡಿದ್ದ ಕಿವೀಸ್ ತಂಡ, ಇದೀಗ ಬ್ಲೊಮ್‌ಫೊಂಟೀನ್‌ನಲ್ಲಿ ಈ ಪಂದ್ಯ ಆಡಬೇಕಾಗಿದೆ. ಭಾರತ ತಂಡವು ಲೀಗ್‌ ಹಂತದಲ್ಲಿ ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಅಮೆರಿಕ ತಂಡಗಳನ್ನು ಸೋಲಿಸಿತ್ತು. ಮೂರೂ ಪಂದ್ಯಗಳಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದೆ. ದೇಶಿಯ ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಿರುವ ಸರ್ಫರಾಜ್ ಅಹ್ಮದ್ ಅವರ ಸೋದರ, ಮೂರನೇ ಕ್ರಮಾಂಕದ ಆಟಗಾರ ಮುರ್ಷೀರ್ ಖಾನ್ ಉತ್ತಮ ಲಯದಲ್ಲಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಬ್ಯಾಟರ್ ಆದರ್ಶ್ ಸಿಂಗ್ ಈ ಬಾರಿ ಉತ್ತಮ ಕಾಣಿಕೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದ ಅರ್ಷಿನ್ ಕುಲಕರ್ಣಿ ಇಲ್ಲಿಯೂ ಉತ್ತಮ ಕೊಡುಗೆ ನೀಡುವ ಉತ್ಸಾಹದಲ್ಲಿದ್ದಾರೆ. ನಾಯಕ ಉದಯ್ ಸಹಾರನ್ ಕೂಡ ಒಂದು ಉಪಯುಇಕ್ತ ಇನಿಂಗ್ಸ್ ಆಡಿದ್ದು, ಅದೇ ಲಯ ಮುಂದುವರಿಸುವ ಗುರಿಯಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಎಡಗೈ ವೇಗಿ ನಮನ್ ತಿವಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾ ವಿರುದ್ಧ ಬರಿಗೈಯಲ್ಲಿ ಮರಳಿದ್ದ ಅವರು ನಂತರದ ಎರಡು ಪಂದ್ಯಗಳಲ್ಲಿ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ. ಎಡಗೈ ಸ್ಪಿನ್ನರ್ ಸೌಮಿ ಪಾಂಡೆ ಅವರೂ ಪರಿಣಾಮಕಾರಿ ಎನಿಸಿದ್ದಾರೆ. ಅವರ ಇಕಾನಮಿ ರೇಟ್‌ ಟೂರ್ನಿಯಲ್ಲಿ ಎರಡನೇ ಅತಿ ಉತ್ತಮವಾಗಿದೆ. ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ನ್ಯೂಜಿಲೆಂಡ್‌ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. ಅಫ್ಗಾನಿಸ್ತಾನ ವಿರುದ್ಧ ಒಂದು ವಿಕೆಟ್‌ನ ರೋಚಕ ಜಯ ಪಡೆದಿದ್ದ ನ್ಯೂಜಿಲೆಂಡ್, ಪಾಕಿಸ್ತಾನ ಕೈಲಿ 10 ವಿಕೆಟ್‌ಗಳ ಸೋಲು ಕಂಡಿತ್ತು. ಈಗ ಭಾರತ ಮುಂದೆ ಬ್ಯಾಟರ್‌ಗಳಿಗೆ ಸವಾಲು ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.