ರಣಜಿ ಟ್ರೋಫಿ | ಕರ್ನಾಟಕ ಜಯಕ್ಕೆ ಬೇಕು ಏಳು ವಿಕೆಟ್ ಅಗರ್ತಲಾ: ಇಲ್ಲಿಯ ಎಂಬಿಬಿ ಕ್ರೀಡಾಂಗಣದಲ್ಲಿ ತ್ರಿಪುರ ಮತ್ತು ಕರ್ನಾಟಕ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯವು ರೋಚಕ ಘಟ್ಟ ತಲುಪಿದೆ. ಪಂದ್ಯದ ಕೊನೆಯ ದಿನವಾದ ಸೋಮವಾರ ಆತಿಥೇಯ ತ್ರಿಪುರ ತಂಡವು ಜಯಿಸಬೇಕಾದರೆ 134 ರನ್‌ಗಳನ್ನು ಗಳಿಸಬೇಕು. ಅದಕ್ಕೂ ಮುನ್ನ ತ್ರಿಪುರ ತಂಡದ ಉಳಿದಿರುವ ಏಳು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸಿದರೆ ಮಯಂಕ್ ಅಗರವಾಲ್ ಬಳಗವು ಜಯದ ಸಂಭ್ರಮ ಆಚರಿಸಬಹುದು. ಆದ್ದರಿಂದ ತಂಡವು ತನ್ನ ಬೌಲರ್‌ಗಳ ಮೇಲೆ ಭರವಸೆಯ ನೋಟ ನೆಟ್ಟಿದೆ. ಭಾನುವಾರ 193 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿರುವ ತ್ರಿಪುರ ತಂಡವು ಮೂರನೇ ದಿನದಾಟದ ಮುಕ್ತಾಯಕ್ಕೆ 24 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 59 ರನ್ ಗಳಿಸಿದೆ. ಸುದೀಪ್ ಚಟರ್ಜಿ (ಬ್ಯಾಟಿಂಗ್ 26) ಮತ್ತು ಗಣೇಶ್ ಸತೀಶ್ (ಬ್ಯಾಟಿಂಗ್ 3) ಕ್ರೀಸ್‌ನಲ್ಲಿದ್ದಾರೆ. ಕರ್ನಾಟಕದ ವಿದ್ವತ್, ಕೌಶಿಕ್ ಮತ್ತು ವೈಶಾಖ ತಲಾ ಒಂದು ವಿಕೆಟ್ ಗಳಿಸಿದ್ದಾರೆ. ದುರ್ಬಲ ಬ್ಯಾಟಿಂಗ್: ಮೊದಲ ಇನಿಂಗ್ಸ್‌ನಲ್ಲಿ 41 ರನ್‌ ಮುನ್ನಡೆ ಗಳಿಸಿದ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಗುರಿ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಕೇವಲ 151 ರನ್‌ ಗಳಿಸಿ ಆಲೌಟ್ ಆಯಿತು. ಪದಾರ್ಪಣೆ ಪಂದ್ಯ ಆಡುತ್ತಿರುವ ಕಿಶನ್ ಬೆದರೆ (42; 59ಎ, 4X8) ಮತ್ತು ಶರತ್ ಶ್ರೀನಿವಾಸ್ (48; 99ಎ, 4X6) ಅವರು ಉತ್ತಮವಾಗಿ ಆಡಿದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ವೈಶಾಖ ಈ ಇನಿಂಗ್ಸ್‌ನಲ್ಲಿ 22 ರನ್‌ಗಳ ಕಾಣಿಕೆ ನೀಡಿದರು. ಆರಂಭಿಕ ಬ್ಯಾಟರ್ ಆರ್ ಸಮರ್ಥ್ ಖಾತೆ ತೆರೆಯಲಿಲ್ಲ. ನಿಕಿನ್ ಜೋಸ್, ಕೆ.ವಿ. ಅನೀಶ್ ಕೂಡ ಎರಡಂಕಿ ಮುಟ್ಟಲಿಲ್ಲ. ನಾಯಕ ಮಯಂಕ್ ಕೇವಲ 17 ರನ್‌ ಗಳಿಸಿದರು. ತ್ರಿಪುರ ತಂಡದ ಮಣಿಶಂಕರ್ ಮುರಾಸಿಂಗ್ ಮತ್ತು ರಾಣಾ ದತ್ತಾ ಅವರು ತಲಾ ಮೂರು ವಿಕೆಟ್ ಗಳಿಸಿದರು. ಗುರಿ ಬೆನ್ನಟ್ಟಿದ ಆತಿಥೇಯ ತಂಡಕ್ಕೆ ಕರ್ನಾಟಕದ ಕೌಶಿಕ್ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ನಾಲ್ಕನೇ ಓವರ್‌ನಲ್ಲಿ ಅವರು ಬಿ.ಬಿ. ಘೋಷ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಎರಡು ಓವರ್‌ಗಳ ನಂತರ ಬಿಕ್ರಂ ಕುಮಾರ್ ಅವರನ್ನು ವಿದ್ವತ್ ಎಲ್‌ಬಿಡಬ್ಲ್ಯು ಜಾಲದಲ್ಲಿ ಬೀಳಿಸಿದರು. ಇದರಿಂದಾಗಿ ತಂಡವು 14 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಶ್ರೀಧಾಮ್ ಪಾಲ್ (21 ರನ್) ಮತ್ತು ಸುದೀಪ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 36 ರನ್ ಸೇರಿಸಿ ತುಸು ಚೇತರಿಕೆ ನೀಡಿದರು. ವೈಶಾಖ ಅವರು ಶ್ರೀಧಾಮ್ ವಿಕೆಟ್ ಗಳಿಸಿ ಈ ಜೊತೆಯಾಟವನ್ನು ಮುರಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 241, ತ್ರಿಪುರಾ: 200. ಎರಡನೇ ಇನಿಂಗ್ಸ್: ಕರ್ನಾಟಕ: 51.3 ಓವರ್‌ಗಳಲ್ಲಿ 151 (ಕಿಶನ್ ಬೆದರೆ 42, ಶರತ್ ಶ್ರೀನಿವಾಸ್ 48, ವೈಶಾಖ ವಿಜಯಕುಮಾರ್ 22, ಮುರಾಸಿಂಗ್ 29ಕ್ಕೆ3, ರಾಣಾ ದತ್ತಾ 39ಕ್ಕೆ3, ಪರ್ವೇಜ್ ಸುಲ್ತಾನ್ 13ಕ್ಕೆ2) ತ್ರಿಪುರ: 24 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 59 (ಶ್ರೀಧಾಮ್ ಪಾಲ್ 21, ಸುದೀಪ್ ಚಟರ್ಜಿ 26, ವಿದ್ವತ್ ಕಾವೇರಪ್ಪ 15ಕ್ಕೆ1, ವಿ. ಕೌಶಿಕ್ 21ಕ್ಕೆ1, ವೈಶಾಖ ವಿಜಯಕುಮಾರ್ 13ಕ್ಕೆ1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.