19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್: ಕುಲಕರ್ಣಿ ಶತಕ, ಮುಷೀರ್ ಮಿಂಚು ಬ್ಲೂಮ್‌ಫಾಂಟೆನ್: ಅರಶಿಣ್ ಕುಲಕರ್ಣಿ ಅವರ ಅಮೋಘ ಶತಕದ ಬಲದಿಂದ ಭಾರತ ಕ್ರಿಕೆಟ್ ತಂಡವು 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಎದುರಿನ ಪಂದ್ಯದಲ್ಲಿ ಜಯಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ಭಾರತದ ಯುವಪಡೆಯು 201 ರನ್‌ಗಳಿಂದ ಗೆದ್ದಿತು. ಇದರೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ ಸಿಕ್ಸ್‌ ಹಂತದಲ್ಲಿ ಸ್ಥಾನವನ್ನು ಗಟ್ಟಿಗಳಿಸಿಕೊಂಡಿತು. ಟಾಸ್ ಗೆದ್ದ ಅಮೆರಿಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅರಶಿಣ್ ಕುಲಕರ್ಣಿ (108; 118ಎ, 4X8, 6X3) ಮತ್ತು ಮುಷೀರ್ ಖಾನ್ (73; 76ಎ, 4X6, 6X1) ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 326 ರನ್ ಗಳಿಸಿತು. ಅಮೆರಿಕ ತಂಡದ ಅತೀದ್ರ ಸುಬ್ರಮಣಿಯನ್ ಅವರು ಇದ್ದುರಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ ಎರಡು ವಿಕೆಟ್ ಪಡೆದರು. ಭಾರತದ ಮೂಲದ ಆಟಗಾರರೇ ಇರುವ ಅಮೆರಿಕ ತಂಡವು ಗುರಿ ಬೆನ್ನಟ್ಟಿ ತಾಳ್ಮೆಯ ಬ್ಯಾಟಿಂಗ್ ಮಾಡಿತು. ಇನಿಂಗ್ಸ್‌ನಲ್ಲಿ ಸಂಪೂರ್ಣ 50 ಓವರ್‌ಗಳನ್ನೂ ಆಡಿತು. 8 ವಿಕೆಟ್‌ ಕಳೆದುಕೊಂಡು 125 ರನ್‌ ಗಳಿಸಿತು. ಅದರಲ್ಲಿ ಉತ್ಕರ್ಷ್ ಶ್ರೀವಾಸ್ತವ್ 40 ಮತ್ತು ಅಮೋಘ್ ಅರೇಪಳ್ಳಿ 27 ರನ್‌ಗಳನ್ನು ಗಳಿಸಿದರು. ಭಾರತ ತಂಡದ ಬೌಲರ್ ನಮನ್ ತಿವಾರಿ ನಾಲ್ಕು ವಿಕೆಟ್ ಗಳಿಸಿದರು. ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 326 (ಅರಶಿಣ್ ಕುಲಕರ್ಣಿ 108, ಮುಷೀರ್ ಖಾನ್ 73, ಅತೀಂದ್ರ ಸುಬ್ರಮಣಿಯನ್ 45ಕ್ಕೆ2) ಅಮೆರಿಕ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 125 (ಉತ್ಕರ್ಷ್ ಶ್ರೀವಾಸ್ತವ 40, ನಮನ್ ತಿವಾರಿ 20ಕ್ಕೆ4) ಫಲಿತಾಂಶ: ಭಾರತ ತಂಡಕ್ಕೆ 201 ರನ್‌ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.