U19 | ಮುಶೀರ್ ಶತಕ; ಭಾರತಕ್ಕೆ ಜಯ ಬ್ಲೊಮ್‌ಫೋಂಟೀನ್ (ದಕ್ಷಿಣ ಆಫ್ರಿಕಾ): ಭಾರತ ತಂಡ, ಐಸಿಸಿ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿ ‘ಎ’ ಗುಂಪಿನ ಪಂದ್ಯದಲ್ಲಿ ಗುರುವಾರ 201 ರನ್‌ಗಳಿಂದ ಐರ್ಲೆಂಡ್‌ ತಂಡವನ್ನು ನಿರಾಯಾಸವಾಗಿ ಸೋಲಿಸಿತು. ಪ್ರತಿಭಾನ್ವಿತ ಬ್ಯಾಟರ್‌ ಮುಶೀರ್‌ ಖಾನ್‌ ಆಕರ್ಷಕ ಶತಕದ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ‌ಸತತ ಎರಡನೇ ಗೆಲುವಿನ ಮೂಲಕ ಭಾರತ ಸೂಪರ್‌ ಸಿಕ್ಸ್‌ಗೆ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತು. ಅವರು 106 ಎಸೆತಗಳಲ್ಲಿ 118 ರನ್‌ ಗಳಿಸಿದ್ದರಿಂದ ಭಾರತ 7 ವಿಕೆಟ್‌ಗೆ 301 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಈ ದೊಡ್ಡ ಗುರಿಯೆದುರು ದುರ್ಬಲ ಐರ್ಲೆಂಡ್‌ ತಂಡ ಹೆಚ್ಚು ಹೋರಾಟ ತೋರದೇ 29.4 ಓವರುಗಳಲ್ಲಿ 100 ರನ್ನಿಗೆ ಕುಸಿಯಿತು. ಎಡಗೈ ಮಧ್ಯಮ ವೇಗಿ ನಮನ್ ತಿವಾರಿ 53 ರನ್ನಿಗೆ 4 ವಿಕೆಟ್‌ ಪಡೆದರೆ, ಎಡಗೈ ಸ್ಪಿನ್ನರ್ ಸೌಮಿ ಕುಮಾರ್ ಪಾಂಡೆ 9 ಓವರುಗಳಲ್ಲಿ 21 ರನ್ನಿತ್ತು 3 ವಿಕೆಟ್‌ ಪಡೆದರು. ಐರ್ಲೆಂಡ್‌ನ ಏಳು ಮಂದಿ ಎರಡಂಕಿ ಮೊತ್ತ ಕೂಡ ತಲುಪಲಿಲ್ಲ. ಮುಶೀರ್ 161 ರನ್‌ ಗಳಿಸಿದ ದಿನವೇ ಅವರ ಅಣ್ಣ ಸರ್ಫರಾಜ್ ಸಾವಿರಾರು ಮೈಲು ದೂರದ ಅಹಮದಾಬಾದಿನಲ್ಲಿ ಭಾರತ ‘ಎ’ ತಂಡದ ಪರ ಇಂಗ್ಲೆಂಡ್ ಲಯನ್ಸ್ ವಿರುದ್ಧ ‘ಟೆಸ್ಟ್’ ಪಂದ್ಯದಲ್ಲಿ 161 ರನ್ ಗಳಿಸಿದ್ದು ವಿಶೇಷ. ‘ನಮ್ಮಿಬ್ಬರದೂ ಒಂದೇ ಶೈಲಿಯ ಆಟ. ನನಗೆ ಸಂಸತವಾಗಿದೆ. ಆದರೆ ಸಂತೃಪ್ತನಾಗಿಲ್ಲ. ಮುಂದಿನ ಪಂದ್ಯಗಳಲ್ಲಿ ಇನ್ನೂ ಚೆನ್ನಾಗಿ ಆಡಬೇಕಾಗಿದೆ. ಕಳೆದ ಪಂದ್ಯದಲ್ಲಿ ಸ್ವಲ್ಪ ಅವಸರ ಮಾಡಿದೆ. ಇಲ್ಲಿ ಸಹನೆ ವಹಿಸಿ ಸಡಿಲ ಎಸೆತಗಳನ್ನು ದಂಡಿಸಿದೆ’ ಎಂದು ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದ ಮುಶೀರ್ ಹೇಳಿದರು. 18 ವರ್ಷದ ಮುಶೀರ್ 9 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ಇನಿಂಗ್ಸ್‌ಗೆ ವೇಗ ನೀಡಿದರು. ಮೊದಲ 50 ರನ್‌ ಗಳಿಸಲು 66 ಎಸೆತ ತೆಗೆದುಕೊಂಡಿದ್ದ ಅವರು ನಂತರ 50 ರನ್‌ಗಳಿಗೆ ತೆಗೆದುಕೊಂಡಿದ್ದು 34 ಎಸೆತಗಳನ್ನಷ್ಟೇ. ಕೊನೆಯಲ್ಲಿ ಸಚಿನ್‌ ದಾಸ್‌ 9 ಎಸೆತಗಳಲ್ಲಿ 21 ರನ್ ಸಿಡಿಸಿದರು. ಭಾರತ ಕೊನೆಯ 10 ಓವರುಗಳಲ್ಲಿ 119 ರನ್ ಬಾಚಿಕೊಂಡಿತು. ಮೊದಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ನಾಯಕ ಉದಯ್‌ ಸಹಾರನ್ ಇಲ್ಲೂ ಉಪಯುಕ್ತ ಆಟವಾಡಿ 84 ಎಸೆತಗಳಲ್ಲಿ 5 ಬೌಂಡರಿಗಳಿದ್ದ 75 ರನ್ ಗಳಿಸಿ ಇನಿಂಗ್ಸ್‌ಗೆ ಲಂಗರು ಹಾಕಿದರು. ಭಾರತದ ದೊಡ್ಡ ಮೊತ್ತಕ್ಕೆ ಉತ್ತರವಾಗಿ ಒಂದು ಹಂತದಲ್ಲಿ 8 ವಿಕೆಟ್‌ಗೆ 45 ರನ್ ಗಳಿಸಿ ಬಸವಳಿದಿದ್ದ ಐರ್ಲೆಂಡ್ ತಂಡ ಹತ್ತನೇ ಕ್ರಮಾಂಕದ ಆಟಗಾರ ಡೇನಿಯಲ್ ಫೋರ್ಕಿನ್ ಗಳಿಸಿದ ಅಜೇಯ 27 ರನ್ ಮತ್ತು ಒಲಿವರ್ ಅವರ 15 ರನ್‌ಗಳ ನೆರವಿನಿಂದ ಬರೋಬ್ಬರಿ ನೂರು ತಲುಪಲು ಸಾಧ್ಯವಾಯಿತು. ಸಂಕ್ಷಿಪ್ತ ಸ್ಕೋರುಗಳು: ಭಾರತ: 50 ಓವರುಗಳಲ್ಲಿ 7 ವಿಕೆಟ್‌ಗೆ 301 (ಮುಶೀರ್ ಖಾನ್ 118, ಉದಯ್ ಸಹಾರನ್‌ 75, ಒಲಿವರ್ ರಿಲಿ 55ಕ್ಕೆ3); ಐರ್ಲೆಂಡ್‌: 29.4 ಓವರುಗಳಲ್ಲಿ 100 (ನಮನ್ ತಿವಾರಿ 53ಕ್ಕೆ4, ಸೌಮಿ ಕುಮಾರ್ ಪಾಂಡೆ 21ಕ್ಕೆ3) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.