ಐಸಿಸಿ ರ‍್ಯಾಂಕಿಂಗ್: ಅಗ್ರಸ್ಥಾನ ಉಳಿಸಿಕೊಂಡ ಅಶ್ವಿನ್ ದುಬೈ (ಪಿಟಿಐ): ಭಾರತ ತಂಡದ ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು ಅಂರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟೆಸ್ಟ್ ವಿಭಾಗದ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಒಟ್ಟು ಆರು ವಿಕೆಟ್ ಗಳಿಸಿದ್ದರು. ಅವರ ಖಾತೆಯಲ್ಲಿ ಈಗ 853 ರೇಟಿಂಗ್ ಪಾಯಿಂಟ್ಸ್ ಇವೆ. ಬೂಮ್ರಾ ಕೂಡ ಅದೇ ಟೆಸ್ಟ್‌ನಲ್ಲಿ ಅರ್ಧ ಡಜನ್ ವಿಕೆಟ್ ಗಳಿಸಿದ್ದರು. ಇವರಿಬ್ಬರೂ ಸೇರಿದಂತೆ ಅಗ್ರ ಹತ್ತರಲ್ಲಿ ಭಾರತದ ಮೂವರು ಬೌಲರ್‌ಗಳಿದ್ದಾರೆ. ಅದರಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಆರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಮತ್ತು ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಅಶ್ವಿನ್ ಇದ್ದಾರೆ. ಇಂಗ್ಲೆಂಡ್ ತಂಡದ ಜೋ ರೂಟ್ ಅವರು ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಬಾಂಗ್ಲಾದ ಶಕೀಬ್ ಮತ್ತು ಭಾರತದ ಅಕ್ಷರ್ ಪಟೇಲ್ ಅವರು ಈ ವಿಭಾಗದಲ್ಲಿ ತಲಾ ಒಂದು ಸ್ಥಾನ ಕೆಳಗಿಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.