ಹಣ ದುರುಪಯೋಗ: ಟಿಸಿಎ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್‌ ಅಗರ್ತಲಾ (ಪಿಟಿಐ): ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ತ್ರಿಪುರಾ ಕ್ರಿಕೆಟ್ ಸಂಸ್ಥೆಯ (ಟಿಸಿಎ) ಮಾಜಿ ಕಾರ್ಯದರ್ಶಿ ತಪಸ್ ಘೋಷ್ ಸೇರಿದಂತೆ ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಗುಪ್ತ ಐಜಿ ಎಲ್‌.ಡಾರ್ಲಾಂಗ್‌ ಗುರುವಾರ ತಿಳಿಸಿದ್ದಾರೆ. ಟಿಸಿಎ ಮಾಜಿ ಉಪಾಧ್ಯಕ್ಷ ತಿಮಿರ್ ಚಂದಾ ಮತ್ತು ಮಾಜಿ ಖಜಾಂಚಿ ಜಯಲಾಲ್ ದಾಸ್ ಅವರನ್ನೂ ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ. ‘ಹಣಕಾಸು ಅಕ್ರಮಗಳ ಬಗ್ಗೆ ಮೇಲ್ನೋಟಕ್ಕೆ ಪುರಾವೆಗಳು ದೊರೆತ ಕಾರಣ ಟಿಸಿಎ ಮಾಜಿ ಕಾರ್ಯದರ್ಶಿ ತಪನ್ ಘೋಷ್ ಸೇರಿದಂತೆ ಹತ್ತು ಜನರ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ಎಫ್ಐಆರ್ ದಾಖಲಿಸಿದೆ. ಆರಂಭದಲ್ಲಿ ₹10 ಕೋಟಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದೆ. ಆದರೆ ಈ ಮೊತ್ತ ಮತ್ತಷ್ಟು ಹೆಚ್ಚಾಗಬಹುದು’ ಎಂದು ಡಾರ್ಲಾಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಟಿಸಿಎಯ ಮೂವರು ಎಂಜಿನಿಯರ್‌ಗಳಾದ ತರುಣ್ ಕುಮಾರ್ ದಾಸ್, ಅರುಣಾಭ ನಾಥ್ ಮತ್ತು ರಹಾದ್ ಸರ್ಕಾರ್ ಅವರನ್ನೂ ಎಫ್ಐಆರ್‌ನಲ್ಲಿ ಸೇರಿಸಲಾಗಿದೆ. ಇದಲ್ಲದೆ, ಎಂಬಿಬಿ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಕಂಬಗಳನ್ನು ಅಳವಡಿಸುವ ಟೆಂಡರ್ ಪಡೆದ ಕೋಲ್ಕತ್ತ ಮೂಲದ ಎರಡು ಕಂಪನಿಗಳ ಮೂವರು ಕಾರ್ಯನಿರ್ವಾಹಕರು ಮತ್ತು ಟಿಸಿಎಯ ಆಜೀವ ಸದಸ್ಯರನ್ನು ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.