ಟಿ20 ವಿಶ್ವಕಪ್‌ ಟೂರ್ನಿಯಿಂದಾಗಿ ಐಪಿಎಲ್‌ ಮಹತ್ವ ಹೆಚ್ಚಿದೆ: ಚೆನ್ನೈ: ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ತಂಡಗಳ ಆಯ್ಕೆಗೆ ಪ್ರಮುಖ ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಸಾಧನೆಯನ್ನು ಪರಿಗಣಿಸಸಲಾಗುತ್ತಿದೆ. ಆದ್ದರಿಂದ ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಗುಣಮಟ್ಟ ವೃದ್ಧಿಸಲಿದೆ. ಜೂನ್‌ ತಿಂಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿವೆ. ಅದಕ್ಕೂ ಮುನ್ನ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಅಬುಧಾಬಿಯಲ್ಲಿ ಇಂಟರ್‌ನ್ಯಾಷನಲ್ ಲೀಗ್ ಟಿ20 ಟೂರ್ನಿಗಳು ನಡೆಯಲಿವೆ. ‘ಐಪಿಎಲ್‌ನಲ್ಲಿ ಹೆಚ್ಚು ರನ್‌ ಗಳಿಸಿದರೆ, ಬಹಳಷ್ಟು ವಿಕೆಟ್ ಪಡೆದರೆ ಮತ್ತು ನಿರಂತರವಾಗಿ ಉತ್ತಮವಾಗಿ ಆಡುವ ಆಟಗಾರರು ತಮ್ಮ ದೇಶದ ತಂಡದ ಆಯ್ಕೆಗಾರರ ಗಮನ ಸೆಳೆಯುವುದು ಖಚಿತ’ ಎಂದು ಐಎಲ್‌ಟಿ20 ಟೂರ್ನಿಯಲ್ಲಿ ಆಡುವ ಡಸರ್ಟ್ ವೈಪರ್ಸ್ ತಂಡವು ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಟಾಮ್ ಮೂಡಿ ಹೇಳಿದ್ಧಾರೆ. ‘ವಿಶ್ವಕಪ್ ಮುನ್ನ ಹೆಚ್ಚು ಟಿ20 ದ್ವಿಪಕ್ಷೀಯ ಟೂರ್ನಿಗಳು ಇಲ್ಲ. ಆದ್ದರಿಂದ ಐಪಿಎಲ್ ಮತ್ತು ಐಟಿಎಲ್ ಟೂರ್ನಿಗಳು ಮಹತ್ವ ಪಡೆದುಕೊಂಡಿವೆ’ ಎಂದರು. ಐಪಿಎಲ್‌ನಲ್ಲಿ ಉತ್ತಮವಾಗಿ ಆಡುವ ತಮ್ಮ ತಂಡದಲ್ಲಿ ಖಾಲಿ ಇರುವ ಕೆಲವು ಸ್ಥಳಗಳನ್ನು ಭರ್ತಿ ಮಾಡಲು ಐಪಿಎಲ್‌ನಲ್ಲಿ ಉತ್ತಮವಾಗಿ ಆಡುವವರನ್ನು ಗಮನಿಸಲಾಗುವುದು ಎಂದು ಈಚೆಗೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಹೇಳಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.