ಟೆಸ್ಟ್ ಸರಣಿಯಲ್ಲಿ 3 ಪಂದ್ಯ: ಎಂಸಿಸಿ ಲಂಡನ್ (ಪಿಟಿಐ): ಪ್ರತಿಯೊಂದು ಟೆಸ್ಟ್ ಸರಣಿಯಲ್ಲಿಯೂ ಕನಿಷ್ಟ ಮೂರು ಪಂದ್ಯಗಳು ಇರಬೇಕು ಎಂದು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ವಿಶ್ವ ಕ್ರಿಕೆಟ್ ಸಂಸ್ಥೆಯು ಶಿಫಾರಸು ಮಾಡಿದೆ. ಹೋದ ವಾರ ಕೇಪ್‌ಟೌನ್‌ನಲ್ಲಿ ಸಭೆ ಸೇರಿದ್ದ ಎಂಸಿಸಿ ಸಮಿತಿಯಲ್ಲಿ ಕೆಲವು ನಿಯಮಗಳ ಪರಿಷ್ಕರಣೆಗೆ ಶಿಫಾರಸು ಮಾಡಲಾಯಿತು. ಇದರಲ್ಲಿ ಸರಣಿಯಲ್ಲಿ ಮೂರು ಟೆಸ್ಟ್‌ಗಳ ಕುರಿತು ಹೇಳಲಾಗಿದೆ. ಈಚೆಗೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ನಡುವಣ ಟೆಸ್ಟ್ ಸರಣಿಗಳಲ್ಲಿ ಕೇವಲ ಎರಡು ಪಂದ್ಯಗಳಿದ್ದವು. ಎರಡೂ ಸರಣಿಗಳು ಸಮಬಲಗೊಂಡಿದ್ದವು. ‘ಪ್ರಸ್ತುತ ಕೆಲವು ಟೆಸ್ಟ್ ಪಂದ್ಯಗಳಲ್ಲಿ ರೋಚಕ ಫಲಿತಾಂಶಗಳು ಹೊರಹೊಮ್ಮುತ್ತಿವೆ. ಸಾಂಪ್ರದಾಯಿಕ ಮಾದರಿಯ ಕ್ರಿಕೆಟ್‌ಗೆ ಇದು ಆಶಾದಾಯಕ ಬೆಳವಣಿಗೆಯಾಗಿದೆ. ಆದ್ದರಿಂದ ಸರಣಿ ವಿಜೇತ ತಂಡವನ್ನು ನಿರ್ಧರಿಸಲು ಕನಿಷ್ಠ ಮೂರು ಪಂದ್ಯಗಳಿದ್ದರೆ ಸೂಕ್ತ’ ಎಂದು ಸಮಿತಿ ಹೇಳಿದೆ. ‘ಪ್ರಸಾರ ಹಕ್ಕುಗಳ ಆದಾಯವನ್ನು ಸರಣಿಯ ಆತಿಥ್ಯ ವಹಿಸುವ ದೇಶಗಳು ಪಡೆದುಕೊಳ್ಳುತ್ತಿವೆ. ಈ ನಿಯಮ ಪರಿಷ್ಕರಣೆ ಮಾಡುವುದು ಅಗತ್ಯವಾಗಿದೆ. ಆತಿಥೇಯ ದೇಶವೇ ಪ್ರವಾಸಿ ತಂಡದ ವೆಚ್ಚಗಳನ್ನು ಭರಿಸುವ ನಿಯಮ ಬರಬೇಕು’ ಎಂಬ ಅಭಿಪ್ರಾಯವ್ಯಕ್ತವಾಗಿದೆ. ವಿಶ್ವ ಕ್ರಿಕೆಟ್ ಸಮಿತಿಯಲ್ಲಿ ಕ್ಲೇರ್ ಕಾನರ್, ಕುಮಾರ ಧರ್ಮಸೇನಾ, ಸೌರವ್ ಗಂಗೂಲಿ, ಜೂಲನ್ ಗೋಸ್ವಾಮಿ, ಹೀಥರ್ ನೈಟ್, ಜಸ್ಟಿನ್ ಲ್ಯಾಂಗರ್, ಏಯಾನ್ ಮಾರ್ಗನ್, ರಮಿಜ್ ರಝಾ, ರಿಕಿ ಸ್ಕೆರಿಟ್ ಮತ್ತು ಗ್ರೆಮ್ ಸ್ಮಿತ್ ಇದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.