ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ನಿಧನ ನವದೆಹಲಿ: ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ಮತ್ತು ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ವಯೋಸಹಜ ಕಾಯಿಲೆಗಳಿಂದ ಮಂಗಳವಾರ ನಿಧನರಾದರು. ಭಾರತ ಕ್ರಿಕೆಟ್ ತಂಡದ ಮಾಜಿ ಓಪನರ್ ಮತ್ತು ರಾಷ್ಟ್ರೀಯ ತಂಡದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ತಂದೆ ಗಾಯಕ್ವಾಡ್ ಅವರಿಗೆ 95 ವರ್ಷ ವಯಸ್ಸಾಗಿತ್ತು. ಕಳೆದ 12 ದಿನಗಳಿಂದ ಬರೋಡಾ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಪಿಟಿಐಗೆ ತಿಳಿಸಿವೆ. 1952 ಮತ್ತು 1961 ರ ನಡುವೆ ಅವರು ಭಾರತದ ಪರ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 1959ರಲ್ಲಿ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ರಾಷ್ಟ್ರೀಯ ತಂಡದ ನಾಯಕರಾಗಿದ್ದರು. ಬಲಗೈ ಬ್ಯಾಟರ್ ಗಾಯಕ್ವಾಡ್ ಅವರು 1952ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 1961ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ ಅಂತಿಮ ಪಂದ್ಯ ಆಡಿದ್ದರು. ರಣಜಿ ಟ್ರೋಫಿಯಲ್ಲಿ, ಗಾಯಕ್ವಾಡ್ 1947 ರಿಂದ 1961ರವರೆಗೆ ಅವರು ಬರೋಡಾವನ್ನು ಪ್ರತಿನಿಧಿಸಿದ್ದರು. 14 ಶತಕಗಳು ಸೇರಿ 47.56 ರ ಸರಾಸರಿಯಲ್ಲಿ 3139 ರನ್ ಗಳಿಸಿದ್ದಾರೆ. 1959-60ರ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ ಔಟಾಗದೆ 249 ರನ್ ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.