ರಣಜಿಯಲ್ಲಿ ಆಡಿದರಷ್ಟೇ ಐಪಿಎಲ್: ಬಿಸಿಸಿಐ ಚಿಂತನೆ ಮುಂಬೈ : ಜಾರ್ಖಂಡ್ ವಿಕೆಟ್ ಕೀಪರ್-ಬ್ಯಾಟರ್‌ ಇಶಾನ್ ಕಿಶನ್ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಹಿಂಜರಿಯುತ್ತಿರುವುದು ಮತ್ತು ಐಪಿಎಲ್ ಮೇಲೆ ಮಾತ್ರ ಗಮನ ಹರಿಸುತ್ತಿರುವ ಕಾರಣ ಐಪಿಎಲ್ ಹರಾಜು ಪೂಲ್‌ಗೆ ಅರ್ಹರಾಗಲು ಆಟಗಾರರಿಗೆ ಕನಿಷ್ಠ ಸಂಖ್ಯೆಯ ರಣಜಿ ಟ್ರೋಫಿ ಪಂದ್ಯಗಳನ್ನು ಬಿಸಿಸಿಐ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಫೆಬ್ರವರಿ 16 ರಿಂದ ರಣಜಿ ಟ್ರೋಫಿ ಟೂರ್ನಿಯ ಕೊನೆಯ ಪಂದ್ಯ ಆರಂಭವಾಗಲಿದೆ. ಇಶಾನ್ ತವರು ಜಾರ್ಖಂಡ್ ತಂಡವು ಜೆಮ್‌ಶೆಡ್‌ಪುರದಲ್ಲಿ ರಾಜಸ್ಥಾನ ವಿರುದ್ಧ ಆಡಲಿದೆ. ಅದರಲ್ಲಿ ಆಡಲು ಇಶಾನ್‌ಗೆ ಬಿಸಿಸಿಐ ಈಗಾಗಲೇ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಮಾನಸಿಕ ಒತ್ತಡದಿಂದಾಗಿ ವಿಶ್ರಾಂತಿ ಬಯಸಿದ್ದ ಇಶಾನ್, ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯ ಮಧ್ಯದಲ್ಲಿ ಹಿಂದಿರುಗಿದ್ದರು. ಆದರೆ, ಅವರು ರಣಜಿ ಟೂರ್ನಿಯಲ್ಲಿಯೂ ಆಡಲಿಲ್ಲ. ಇದೀಗ ಐಪಿಎಲ್‌ ಆಡಲು ಸಿದ್ಧತೆ ಆರಂಭಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಬರೋಡಾದಲ್ಲಿ ಅಭ್ಯಾಸ ನಡೆಸಿದ್ದಾರೆ. ಯುವ ಆಟಗಾರರ ಗುಂಪು ಐಪಿಎಲ್‌ನಿಂದ ಐಪಿಎಲ್ ಆಡುವುದನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಾದ ನೀತಿಯನ್ನು ರೂಪಿಸುವ ಅಗತ್ಯವಿದೆ. ‘ಯುವ ಆಟಗಾರರು ಕೆಂಪು ಚೆಂಡಿನ ಕ್ರಿಕೆಟ್ ಆಡಲು ಹೆಚ್ಚು ಒಲವು ತೋರುತ್ತಿಲ್ಲವೆಂಬ ಸಂಗತಿ ಬಿಸಿಸಿಐ ಗಮನಕ್ಕೆ ಬಂದಿದೆ. ಕೆಲವರು ಆಟಗಾರರು ಭಾರತ ತಂಡದಿಂದ ಹೊರಗಿದ್ದರೆ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡುತ್ತಾರೆ. ನಂತರ ದೀರ್ಘ ಮಾದರಿಯ ಕ್ರಿಕೆಟ್‌ ಟೂರ್ನಿಗಳಲ್ಲಿ ರಾಜ್ಯ ತಂಡಕ್ಕೆ ಮರಳುವುದಿಲ್ಲ. ಅಂತಹ ಆಟಗಾರರಿಗೆ ಪಾಠ ಕಲಿಸಲು ಮಂಡಳಿ ಯೋಚಿಸುತ್ತಿದೆ. ಐಪಿಎಲ್‌ನಲ್ಲಿ ಆಡುವ ಮತ್ತು ಹರಾಜು ಪ್ರಕ್ರಿಯೆಗೆ ಪರಿಗಣಿಸಲು ರಣಜಿ ಟ್ರೋಫಿಯಲ್ಲಿ ಮೂರ್ನಾಲ್ಕು ಪಂದ್ಯಗಳಲ್ಲಿ ಕಡ್ಡಾಯವಾಗಿ ಆಡಬೇಕೆಂಬ ನಿಯಮ ರೂಪಿಸುವ ಚಿಂತನೆ ನಡೆದಿದೆ’ ಎಂದು ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ. ‘ಗಾಯಾಳುವಾಗಿರುವ ಹಾರ್ದಿಕ್ ಪಾಂಡ್ಯ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಟೆಸ್ಟ್ ಮಾದರಿಯ ಪಂದ್ಯಗಳಲ್ಲಿ ಆಡುವ ಒತ್ತಡ ನಿಭಾಯಿಸಲು ಅವರ ದೇಹ ಸಿದ್ಧವಾಗಿಲ್ಲ. ಐಸಿಸಿ ಟೂರ್ನಿಗಳಲ್ಲಿ ಅವರು ಫಿಟ್ ಆಗಿರುವುದು ಮುಖ್ಯವಾಗಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.