2024: ಕೆಕೆಆರ್‌ ತಂಡದಲ್ಲಿ ಬದಲಾವಣೆ, ಅಟ್ಕಿನ್ಸನ್ ಬದಲಿಗೆ ಚಮೀರಗೆ ಸ್ಥಾನ ನವದೆಹಲಿ: ಮುಂಬರುವ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವು (ಕೆಕೆಆರ್‌), ಇಂಗ್ಲೆಂಡ್‌ ವೇಗದ ಬೌಲರ್ ಗಸ್‌ ಅಟ್ಕಿನ್ಸನ್ ಬದಲಿಗೆ ಶ್ರೀಲಂಕಾದ ವೇಗದ ಬೌಲರ್ ದುಷ್ಮಂತ ಚಮೀರ ಅವರನ್ನು ಸೋಮವಾರ ಸೇರ್ಪಡೆ ಮಾಡಿಕೊಂಡಿದೆ. ಚಮೀರ ಅವರು ಕೆಕೆಆರ್‌ ತಂಡವನ್ನು ₹50 ಲಕ್ಷ ಮೀಸಲು ಬೆಲೆಗೆ ಸೇರಿಕೊಳ್ಳಲಿದ್ದಾರೆ ಎಂದು ಐಪಿಎಲ್‌ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಚಮೀರ ಅವರು ರಾಜಸ್ತಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ (ಕ್ರಮವಾಗಿ 2018 ಮತ್ತು 2021ರ ಋತುವಿನಲ್ಲಿ) ಆಡಿದ್ದಾರೆ. 2022ರಲ್ಲಿ ಲಖನೌ ಸೂಪರ್‌ ಜೈಂಟ್ಸ್ ಪರ 12 ಪಂದ್ಯಗಳಲ್ಲಿ ಆಡಿದ್ದ ಅವರು 9 ವಿಕೆಟ್‌ ಪಡೆದಿದ್ದರು. ಮಹಿಳಾ ಲೀಗ್: ಕಶ್ವಿ ಗಾಯಾಳು ಬೆಂಗಳೂರು: ಉದಯೋನ್ಮುಖ ಆಟಗಾರ್ತಿ ಹಾಗೂ ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಭಾರತದ ದುಬಾರಿ ಆಟಗಾರ್ತಿ ಎನಿಸಿರುವ ಕಶ್ವಿ ಗೌತಮ್ ಅವರು ಗಾಯಾಳಾಗಿದ್ದು ಲೀಗ್‌ನಿಂದ ಹಿಂದೆಸರಿದಿದ್ದಾರೆ. ‌ಕಶ್ವಿ ₹2 ಕೋಟಿ ಮೊತ್ತಕ್ಕೆ ಗುಜರಾತ್‌ ಜೈಂಟ್ಸ್ ಪಾಲಾಗಿದ್ದರು. ಜೈಂಟ್ಸ್ ತಂಡ ಈಗ ಅವರ ಬದಲಿಯಾಗಿ ಮುಂಬೈನ ಸಯಾಲಿ ಸಾತ್ಗರೆ ಅವರನ್ನು ಮೀಸಲು ಮೊತ್ತ ₹10 ಲಕ್ಷ ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಭಾರತ ತಂಡದ ಆಲ್‌ರೌಂಡರ್‌ ಕನಿಕಾ ಅಹುಜಾ ಅವರೂ ಗಾಯಾಳಾಗಿ ಎರಡನೇ ಆವೃತ್ತಿಗೆ ಅಲಭ್ಯರಾಗಿದ್ದಾರೆ. ಅವರನ್ನು ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಅವರ ಬದಲಿಗೆ ಮಹಾರಾಷ್ಟ್ರದ ಎಡಗೈ ವೇಗಿ ಶ್ರದ್ಧಾ ಪೊಖಾರ್ಕರ್ ಅವರನ್ನು ಮೀಸಲು ನಿಧಿಯಿಂದ ₹10 ಲಕ್ಷ ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.