‘ಬಾಝ್‌ಬಾಲ್‌’ಗೆ ಮಾಜಿ ನಾಯಕರ ಕಿಡಿ ಲಂಡನ್: ಭಾರತ ವಿರುದ್ಧ ಹಾಲಿ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್ ತಂಡ ಅನುಸರಿಸುತ್ತಿರುವ ‘ಬಾಝ್‌ಬಾಲ್’ ತಂತ್ರವನ್ನು ಆ ತಂಡದ ಮಾಜಿ ನಾಯಕರಾದ ನಾಸಿರ್ ಹುಸೇನ್ ಮತ್ತು ಮೈಕೆಲ್ ವಾನ್ ಕಟುವಾಗಿ ಟೀಕಿಸಿದ್ದಾರೆ. ಸರ್ವ ಕಾಲಕ್ಕೂ ಆಕ್ರಮಣಕಾರಿ ಮನೋಭಾವದ ಒಂದೇ ಸಿದ್ಧಾಂತದ ಬದಲು ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಆಟವಾಡುವ ಕಡೆ ಯೋಚಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಭಾರತ ತಂಡ ಭಾನುವಾರ ರಾಜಕೋಟ್‌ನಲ್ಲಿ ಮುಕ್ತಾಯಗೊಂಡ ಮೂರನೇ ಟೆಸ್ಟ್‌ ಪಂದ್ಯದಲ್ಲಿ 434 ರನ್‌ಗಳ ದಾಖಲೆ ಅಂತರದಿಂದ ಜಯಗಳಿಸಿತ್ತು. ಪ್ರವಾಸಿ ತಂಡ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 122 ರನ್‌ಗಳಿಗೆ ಉರುಳಿತ್ತು. ‘ಇದು ಬೆನ್‌ ಸ್ಟೋಕ್ಸ್‌ ಮತ್ತು ಬ್ರೆಂಡನ್ ಮೆಕ್ಕಲಂ ಅಡಿ ತಂಡ ಕಂಡ ದಯನೀಯ ಸೋಲು. ಅವರ ಕಾರ್ಯತಂತ್ರ ವೈಫಲ್ಯ ಬಯಲಿಗೆಳೆದಿದೆ. ಪ್ರತಿ ಬಾರಿ ಆಕ್ರಮಣದ ಆಟ ನಡೆಯುವುದಿಲ್ಲ. ಸಂದರ್ಭೋಚಿತವಾಗಿ ಆಡಬೇಕಾಗುತ್ತದೆ’ ಎಂದು ವಾನ್ ‘ಟೆಲಿಗ್ರಾಫ್‌.ಕೊ.ಯುಕೆ’ಗೆ ತಮ್ಮ ಅಂಕಣದಲ್ಲಿ ಬರೆದಿದ್ದಾರೆ. ವಾನ್ ಇದೇ ಅಭಿಪ್ರಾಯ ಧ್ವನಿಸಿದ್ದಾರೆ. ‘ಬಾಝ್‌ಬಾಲ್‌ ಆಕ್ರಮಣಕ್ಕಿಳಿಯುವ ತಂತ್ರ ಮಾತ್ರವಲ್ಲ, ಒತ್ತಡ ನಿಯಂತ್ರಿಸುವ ತಂತ್ರ ಕೂಡ’ ಎಂದು ಹುಸೇನ್ ‘ಸ್ಕೈ ಸ್ಪೋರ್ಟ್ಸ್‌’ಗೆ ತಿಳಿಸಿದ್ದಾರೆ. ‘ಅವರು ಯಶಸ್ವಿ ಜೈಸ್ವಾಲ್‌, ಶುಭಮನ್ ಗಿಲ್ ಮೂರನೇ ದಿನ ಆಡಿದ ರೀತಿ ಗಮನಿಸಬೇಕು. ಅವರು 30–40 ಎಸೆತಗಳವರೆಗೆ ಸಂಯಮ ವಹಿಸಿ ಒತ್ತಡ ನಿಭಾಯಿಸಿದರಲ್ಲದೇ, ನಂತರ ಬೌಂಡರಿಗಳನ್ನು ಹೊಡೆಯತೊಡಗಿದರು’ ಎಂದು ಅವರು ಉಲ್ಲೇಖಿಸಿದ್ದಾರೆ. ‘ಭಾರತ 228.5 ಓವರುಗಳಲ್ಲಿ 875 ರನ್ ಹೊಡೆದಿದೆ. ಯಾರೂ ಭಾರತದ ಬ್ಯಾಟಿಂಗ್ ಬೋರು ಹೊಡೆಸಿತು ಎಂದು ಯಾರೂ ನನ್ನ ಬಳಿ ಹೇಳಲಿಲ್ಲ’ ಎಂದು ವಾನ್ ಹೇಳಿದರು. ಸಮರ್ಥನೆ: ಆದರೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕ್ಕಲಂ ‘ಬಾಝ್‌ಬಾಲ್’ ತಂತ್ರ ಸಮರ್ಥಿಸಿಕೊಂಡಿದ್ದಾರೆ. 3ನೇ ಟೆಸ್ಟ್‌ನ ಸೋಲು ನೋವು ಉಂಟುಮಾಡಿದೆ. ಆದರೆ ಆಕ್ರಮಣಕಾರಿ ಮನೋಭಾವದ ಬಾಝ್‌ಬಾಲ್ ತಂತ್ರವನ್ನು ಸರಣಿಯ ಉಳಿದ ಎರಡೂ ಪಂದ್ಯಗಳಲ್ಲಿ ಮುಂದುವರಿಸುವುದಾಗಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.