ಮಹಿಳಾ ಪ್ರೀಮಿಯರ್ ಲೀಗ್: 'ಚಾಂಪಿಯನ್' ಮುಂಬೈಗೆ 172 ರನ್ ಗುರಿ ನೀಡಿದ ಡೆಲ್ಲಿ ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಲೈಸ್ ಕ್ಯಾಪ್ಸೆ, ಜಿಮೈಮಾ ರಾಡ್ರಿಗಸ್ ತೋರಿದ ಅಮೋಘ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಉತ್ತಮ ಮೊತ್ತ ಕಲೆಹಾಕಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಮೆಗ್‌ ಲ್ಯಾನಿಂಗ್ ಪಡೆ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿದೆ. ಹರ್ಮನ್‌ಪ್ರೀತ್‌ ಕೌರ್‌ ಬಳಗದ ಎದುರು ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕಿ ಲ್ಯಾನಿಂಗ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಸ್ಫೋಟಕ ಶೈಲಿಯ ಬ್ಯಾಟರ್‌ ಶಫಾಲಿ ವರ್ಮಾ ಕೇವಲ 1 ರನ್‌ ಗಳಿಸಿ ಔಟಾದರು. ಈ ಹಂತದಲ್ಲಿ ಲ್ಯಾನಿಂಗ್‌ಗೆ ಜೊತೆಯಾದ ಕ್ಯಾಪ್ಸೆ, ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 64 ರನ್ ಕೂಡಿಸಿ ತಮ್ಮ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ನಾಯಕಿಯ ವಿಕೆಟ್ ಪತನದ ಬಳಿಕ ಕ್ಯಾಪ್ಸೆ ಹಾಗೂ ರಾಡ್ರಿಗಸ್ ಆಟ ಕಳೆಗಟ್ಟಿತು. ಬೀಸಾಟವಾಡಿದ ಈ ಜೋಡಿ, 3ನೇ ವಿಕೆಟ್‌ ಪಾಲುದಾರಿಕೆಯಲ್ಲಿ 39 ಎಸೆತಗಳಲ್ಲಿ 74 ರನ್‌ ಸೇರಿಸಿತು. ಕ್ಯಾಪ್ಸೆ 53 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 75 ರನ್‌ ಬಾರಿಸಿದರೆ, ರಾಡ್ರಿಗಸ್ 24 ಎಸೆತಗಳಲ್ಲೇ 5 ಬೌಂಡರಿ ಮತ್ತು 2 ಸಿಕ್ಸರ್‌ ಒಳಗೊಂಡ 42 ರನ್‌ ಚಚ್ಚಿದರು. ಕೊನೆಯಲ್ಲಿ ಮರಿಜಾನೆ ಕಾಪ್ (9 ಎಸೆತ, 16 ರನ್‌) ಸಹ ಉಪಯಕ್ತ ಆಟವಾಡಿದರು. ಹೀಗಾಗಿ, ಡೆಲ್ಲಿ ಪಡೆ ಸವಾಲಿನ ಮೊತ್ತ ಕಲೆಹಾಕಿದೆ. ಮುಂಬೈ ಪರ ನತಾಲೀ ಶೀವರ್ ಬ್ರಂಟ್ ಹಾಗೂ ಅಮೆಲಿಯಾ ಕೆರ್ ತಲಾ ಎರಡು ವಿಕೆಟ್ ಪಡೆದರು. ಇನ್ನೊಂದು ವಿಕೆಟ್‌ ಶಬ್ನಿಮ್ ಇಸ್ಮಾಯಿಲ್ ಅವರ ಪಾಲಾಯಿತು. ಉಭಯ ತಂಡಗಳು ಕಳೆದ ಆವೃತ್ತಿಯ ಫೈನಲ್‌ನಲ್ಲಿ ಸೆಣಸಾಟ ನಡೆಸಿದ್ದವು. ಅನುಭವಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಮುಂಬೈ ಪ‍್ರಶಸ್ತಿಗೆ ಮುತ್ತಿಕ್ಕಿತ್ತು. ಹನ್ನೊಂದರ ಬಳಗ ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹಯಲಿ ಮ್ಯಾಥ್ಯೂಸ್, ನತಾಲೀ ಶೀವರ್ ಬ್ರಂಟ್, ಯಷ್ಟಿಕಾ ಭಾಟಿಯಾ, ಅಮೆಲಿಯಾ ಕೆರ್, ಅಮನ್ಜೋತ್ ಕೌರ್, ಸಂಜೀವನ್ ಸಜನಾ, ಪೂಜಾ ವಸ್ತ್ರಕರ್, ಶಬ್ನಿಮ್ ಇಸ್ಮಾಯಿಲ್, ಕೀರ್ತನಾ ಬಾಲಕೃಷ್ಣ, ಸೈಕಾ ಇಶಾಕಿ. ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಅಲೈಸ್ ಕ್ಯಾಪ್ಸೆ, ಜಿಮೈಮಾ ರಾಡ್ರಿಗಸ್, ಶಿಖಾ ಪಾಂಡೆ, ಮರಿಜಾನೆ ಕಾಪ್, ಅನಾಬೆಲ್ ಸದರ್ಲೆಂಡ್, ಅರುಂಧತಿ ರೆಡ್ಡಿ, ಮಿನು ಮಣಿ, ತಾನಿಯಾ ಭಾಟಿಯಾ, ರಾಧಾ ಯಾದವ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.