: ಟೆಸ್ಟ್‌ ಕ್ರಿಕೆಟ್‌ನಲ್ಲಿ ಐರ್ಲೆಂಡ್‌ಗೆ ಮೊದಲ ಜಯ ಅಬುಧಾಬಿ: ಐರ್ಲೆಂಡ್‌ ತಂಡವು ಅಫ್ಗಾನಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿ, ಸತತ ಏಳು ಪಂದ್ಯಗಳ ಸೋಲಿನ ಸರಣಿಯನ್ನು ಕೊನೆಗೊಳಿಸಿತು. 2018ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದ ಐರ್ಲೆಂಡ್‌, ಈತನಕ ಆಡಿರುವ ಎಂಟು ಪಂದ್ಯಗಳಲ್ಲಿ ಮೊದಲ ಗೆಲುವು ಸಾಧಿಸಿದೆ. ಮೂರನೇ ದಿನದಾಟದಲ್ಲಿ ಗೆಲುವಿಗೆ 111 ರನ್‌ಗಳ ಗುರಿಯನ್ನು ಪಡೆದ ಐರ್ಲೆಂಡ್‌ ತಂಡವು ನಾಯಕ ಆ್ಯಂಡಿ ಬಲ್ಬಿರ್ನಿ (ಔಟಾಗದೆ 58) ಅವರ ಬ್ಯಾಟಿಂಗ್‌ ಬಲದಿಂದ ಜಯ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ 108 ರನ್‌ಗಳ ಹಿನ್ನಡೆ ಅನುಭವಿಸಿದ್ದ ಅಫ್ಗಾನಿಸ್ತಾನ ತಂಡವು ಎರಡನೇ ಇನಿಂಗ್ಸ್‌ನಲ್ಲಿ 218 ರನ್‌ಗೆ ಕುಸಿಯಿತು. ನಾಯಕ ಹಷ್ಮತ್‌ಉಲ್ಲಾ ಶಾಹಿದಿ ಮತ್ತು ರೆಹಮಾನುಲ್ಲಾ ಗುರ್ಬಾಜ್ ಕ್ರಮವಾಗಿ 55 ಮತ್ತು 46 ರನ್‌ ಗಳಿಸಿ ಕೊಂಚ ಹೋರಾಟ ತೋರಿದರು. ಐರ್ಲೆಂಡ್‌ನ ಮಾರ್ಕ್ ಅಡೇರ್, ಬೇರಿ ಮೆಕಾರ್ಥಿ ಮತ್ತು ಕ್ರೇಗ್ ಯಂಗ್ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು. ಸಂಕ್ಷಿಪ್ತ ಸ್ಕೋರ್‌: ಅಫ್ಗಾನಿಸ್ತಾನ ಮೊದಲ ಹಾಗೂ ಎರಡನೇ ಇನಿಂಗ್ಸ್‌: 54.5 ಓವರ್‌ಗಳಲ್ಲಿ 155 ಹಾಗೂ 75.4 ಓವರ್‌ಗಳಲ್ಲಿ 128 ಐರ್ಲೆಂಡ್‌ ಮೊದಲ ಹಾಗೂ ಎರಡನೇ ಇನಿಂಗ್ಸ್‌: ಐರ್ಲೆಂಡ್‌ 83.4 ಓವರ್‌ಗಳಲ್ಲಿ 263 ಹಾಗೂ 31.3 ಓವರ್‌ಗಳಲ್ಲಿ 4 ವಿಕೆಟ್‌ಗೆ 111 ಫಲಿತಾಂಶ: ಐರ್ಲೆಂಡ್‌ಗೆ ಆರು ವಿಕೆಟ್‌ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.