ಮಹಿಳಾ ಪ್ರೀಮಿಯರ್ ಲೀಗ್‌: ಗುಜರಾತ್‌ ಜೈಂಟ್ಸ್‌ ವಿರುದ್ಧ ವಾರಿಯರ್ಸ್‌ಗೆ ಜಯ ಬೆಂಗಳೂರು: ಗ್ರೇಸ್ ಹ್ಯಾರಿಸ್ ಅವರ ಅಜೇಯ ಅರ್ಧಶತಕ ಮತ್ತು ಸೋಫಿ ಎಕ್ಲೆಸ್ಟೋನ್ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಬಲದಿಂದ ಯುಪಿ ವಾರಿಯರ್ಸ್‌ ತಂಡವು ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಶುಕ್ರವಾರ ಗುಜರಾತ್‌ ಜೈಂಟ್ಸ್ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿತು. ಈ ಸಾಧಾರಣ ಗುರಿಯನ್ನು ಯುಪಿ ವಾರಿಯರ್ಸ್‌ ತಂಡವು ಇನ್ನೂ 26 ಎಸೆತ ಬಾಕಿ ಇರುವಂತೆ 4 ವಿಕೆಟ್‌ಗೆ 143 ರನ್‌ ಸೇರಿಸಿ ಸತತ ಎರಡನೇ ಗೆಲುವು ತನ್ನದಾಗಿಸಿಕೊಂಡಿತು. ಯುಪಿ ತಂಡದ ಗ್ರೇಸ್ ಹ್ಯಾರಿಸ್ (ಔಟಾಗದೆ 60, 33ಎ, 4x9, 6x2) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ನಾಯಕಿ ಅಲಿಸಾ ಹೀಲಿ (33, 21ಎ, 4x7) ಬೆಂಬಲ ನೀಡಿದರು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಮತ್ತೆ ಎರಡರಲ್ಲಿ ಸೋತಿರುವ ಯುಪಿ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಆಡಿರುವ ಮೂರು ಪಂದ್ಯದಲ್ಲಿ ಸೋತಿರುವ ಜೈಂಟ್ಸ್‌ ಕೊನೆಯ ಸ್ಥಾನದಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ತಂಡವು ಉತ್ತಮ ಆರಂಭವನ್ನೇನೊ ಮಾಡಿತ್ತು. ಲಾರಾ ವೊಲ್ವಾರ್ಡ್‌ (28, 26ಎ, 4x4) ಮತ್ತು ನಾಯಕಿ ಬೆತ್‌ ಮೂನಿ (16, 16 ಎಸೆತ) ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 41 ರನ್ ಸೇರಿಸಿದರು. ಪವರ್‌ಪ್ಲೇ ಅವಧಿಯೊಳಗೆ ಮೂನಿ ನಿರ್ಗಮಿಸಿದರು. ‌ವೋಲ್ವಾರ್ಡ್‌ ಅವರು ಮಧ್ಯಮ ವೇಗಿ ಅಂಜಲಿ ಸರ್ವಾಣಿ ಬೌಲಿಂಗ್‌ನಲ್ಲಿ ಆಫ್‌ಸೈಡ್‌ಗೆ ಸತತ ಮೂರು ಬೌಂಡರಿಗಳನ್ನು ಬಾರಿಸಿದರು. ಆದರೆ ಪವರ್‌ಪ್ಲೇ ಅವಧಿ (6 ಓವರ್‌: 1 ವಿಕೆಟ್‌ಗೆ 41) ಮುಗಿಯುತ್ತಿದ್ದಂತೆ ರನ್‌ ವೇಗಕ್ಕೆ ಕಡಿವಾಣ ಬಿತ್ತು. ಎಡಗೈ ಸ್ಪಿನ್ನರ್‌ ಸೋಫಿ ಎಕ್ಲೆಸ್ಟೋನ್ ಬೌಲಿಂಗ್‌ನಲ್ಲಿ ಹೊಡೆತಕ್ಕೆ ಮುನ್ನುಗ್ಗಿದ ಅವರು ಮಿಡ್‌ ಆಫ್‌ನಲ್ಲಿ ಕ್ಯಾಚಿತ್ತರು. ಆಸ್ಟ್ರೇಲಿಯಾದ ಆಲ್‌ರೌಂಡರ್‌ಗಳಾದ ಫೋಬಿ ಲಿಚ್‌ಫೀಲ್ಡ್‌ (35, 26 ಎಸೆತ) ಮತ್ತು ಆ್ಯಶ್ಲೆ ಗಾರ್ಡನರ್‌ (30, 17ಎ, 4x4, 1x6) ಅವರು ನಾಲ್ಕನೇ ವಿಕೆಟ್‌ಗೆ ವೇಗವಾಗಿ 52 ರನ್ ಸೇರಿಸಿದ್ದರಿಂದ ಜೈಂಟ್ಸ್ ತಂಡ ಗೌರವದ ಮೊತ್ತ ತಲುಪಲು ಸಾಧ್ಯವಾಯಿತು. ಇಬ್ಬರೂ 19ನೇ ಓವರ್‌ನಲ್ಲಿ ನಿರ್ಗಮಿಸಿದರು. ವಾರಿಯರ್ಸ್‌ ಬೌಲರ್‌ಗಳ ಪೈಕಿ ಸೋಫಿ ಪರಿಣಾಮಕಾರಿಯಾಗಿದ್ದು, 20 ರನ್ನಿಗೆ ಮೂರು ವಿಕೆಟ್ ಪಡೆದು ಮಿಂಚಿದರು. ಗುರಿಯನ್ನು ಬೆನ್ನಟ್ಟಿದ ವಾರಿಯರ್ಸ್‌ ತಂಡದ ಅಲಿಸಾ ಹೀಲಿ ಮತ್ತು ಕಿರಣ್ ನವಗಿರೆ (12) ಮೊದಲ ವಿಕೆಟ್‌ಗೆ 42 ರನ್‌ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, 90 ರನ್‌ ಆಗುವಷ್ಟರಲ್ಲಿ ಪ್ರಮುಖ ಆಟಗಾರ್ತಿಯರಾದ ಅಲಿಸಾ, ಕಿರಣ್‌, ಚಾಮರಿ ಅಟ್ಟಪಟ್ಟು (17) ಮತ್ತು ಶ್ವೇತಾ ಸೆಹ್ರಾವತ್ (2) ನಿರ್ಗಮಿಸಿದರು. ಈ ಹಂತದಲ್ಲಿ ಗ್ರೇಸ್ ಅವರು ದೀಪ್ತಿ ಶರ್ಮಾ (ಔಟಾಗದೆ 17) ಅವರೊಂದಿಗೆ ತಾಳ್ಮೆಯ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಸ್ಕೋರುಗಳು: ಗುಜರಾತ್ ಜೈಂಟ್ಸ್‌: 20 ಓವರುಗಳಲ್ಲಿ 5 ವಿಕೆಟ್‌ಗೆ 142 (ಲಾರಾ ವೋಲ್ವಾರ್ಡ್‌ 28, ಫೋಬಿ ಲಿಚ್‌ಫೀಲ್ಡ್‌ 35, ಆಶ್ಲೆ ಗಾರ್ಡನರ್‌ 30; ಸೋಫಿ ಎಕ್ಲೆಸ್ಟೋನ್ 20ಕ್ಕೆ3) ಯುಪಿ ವಾರಿಯರ್ಸ್‌: 15.4 ಓವರ್‌ಗಳಲ್ಲಿ 4 ವಿಕೆಟ್‌ಗೆ 143 (ಗ್ರೇಸ್ ಹ್ಯಾರಿಸ್ ಔಟಾಗದೆ 60, ಅಲಿಸಾ ಹೀಲಿ 33; ತನುಜಾ ಕನ್ವರ್ 23ಕ್ಕೆ 2). ಫಲಿತಾಂಶ: ಯುಪಿ ವಾರಿಯರ್ಸ್‌ಗೆ 6 ವಿಕೆಟ್‌ ಜಯ. ಶನಿವಾರದ ಪಂದ್ಯ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು– ಮುಂಬೈ ಇಂಡಿಯನ್ಸ್‌ (ರಾತ್ರಿ 7.30) ನೇರಪ್ರಸಾರ: ಸ್ಪೋರ್ಟ್ಸ್‌ 18. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.