ಕೋಲ್ಕತ್ತ ಲೀಗ್ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್: ಗೋಸ್ವಾಮಿ ಆರೋಪ ಕೋಲ್ಕತ್ತ: ಬಂಗಾಳ ಕ್ರಿಕೆಟ್ ಸಂಸ್ಥೆಯ ಪ್ರಥಮ ಡಿವಿಷನ್ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಪಂದ್ಯ ಫಿಕ್ಸಿಂಗ್ ನಡೆದಿದೆ ಎಂದು ವಿಕೆಟ್‌ಕೀಪರ್ –ಬ್ಯಾಟರ್ ಶ್ರೀವತ್ಸ ಗೋಸ್ವಾಮಿ ಆರೋಪಿಸಿದ್ದಾರೆ. 2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿ ಗೋಸ್ವಾಮಿ ಆಡಿದ್ದರು. ಲೀಗ್‌ನಲ್ಲಿ ಮೊಹಮ್ಮಡನ್ ಸ್ಪೋರ್ಟಿಂಗ್ ಮತ್ತು ಟೌನ್ ಕ್ಲಬ್ ತಂಡಗಳ ನಡುವಣ ಪಂದ್ಯದ ವಿಡಿಯೊ ಕ್ಲಿಪ್‌ಗಳನ್ನು ಗೋಸ್ವಾಮಿ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೊಹಮ್ಮಡನ್ ಸ್ಪೋರ್ಟಿಂಗ್ ಬ್ಯಾಟರ್‌ಗಳು ಉದ್ದೇಶಪೂರ್ವಕವಾಗಿ ಔಟ್ ಆಗುತ್ತಿರುವಂತೆ ಕಾಣುತ್ತಿದೆ. ಟೌನ್‌ ಕ್ಲಬ್‌ಗೆ ಏಳು ಅಂಕಗಳನ್ನು ಬಿಟ್ಟುಕೊಡುವ ದುರುದ್ದೇಶ ಅದರದ್ದಾಗಿರುವಂತೆ ಅನುಮಾನವಾಗಿದೆ ಎಂದು ಗೋಸ್ವಾಮಿ ಆರೋಪಿಸಿದ್ಧಾರೆ. ‘ಇದು ಕೋಲ್ಕತ್ತ ಕ್ಲಬ್‌ ಕ್ರಿಕೆಟ್‌ನಲ್ಲಿ ಇದು ಸೂಪರ್ ಡಿವಿಷನ್ ಕ್ರಿಕೆಟ್ ಪಂದ್ಯವಾಗಿದೆ. ಈ ಎರಡೂ ದೊಡ್ಡ ತಂಡಗಳು ಆಡಿವೆ. ತಮಗೇನಾದರೂ ಇಲ್ಲಿ ಏನು ನಡೆಯುತ್ತಿದೆ ಎಂದು ಹೊಳೆಯುತ್ತಿದೆಯೇ’ ಎಂದು ಗೋಸ್ವಾಮಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಟೌನ್‌ ಕ್ಲಬ್‌ ತಂಡವು ಭಾರತ ತಂಡದ ಮಾಜಿ ಮ್ಯಾನೇಜರ್ ದೇವವ್ರತ್ ದಾಸ್ ಅವರದ್ದು. ಸದ್ಯ ಅವರು ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಅವರು ಹಾಕಿರುವ ಮೊದಲ ವಿಡಿಯೊದಲ್ಲಿ ಬಲಗೈ ಬ್ಯಾಟರ್‌ ಒಬ್ಬರು ಸ್ಟಂಪ್‌ಗೆ ನೇರವಾಗಿ ಬಂದ ಎಸೆತವನ್ನು ಆಡದೇ ಬಿಟ್ಟರು. ಕ್ಲೀನ್‌ಬೌಲ್ಡ್ ಆಗಿ ಹೊರನಡೆದರು. ಎರಡನೇ ವಿಡಿಯೊದಲ್ಲಿ ಎಡಗೈ ಬ್ಯಾಟರ್ ವೈಡ್ ಎಸೆತವನ್ನು ಆಡಲು ಕ್ರೀಸ್‌ನಿಂದ ಮುಂದೆ ಬಂದು ಬೀಟ್ ಆಗುತ್ತಾರೆ. ಕೀಪರ್ ಸ್ಟಂಪಿಂಗ್ ಮಾಡುತ್ತಾರೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದಾಗ ದೇವವ್ರತ ದಾಸ್ ಅವರು ಲಭ್ಯರಾಗಲಿಲ್ಲ. ‘ಮಾರ್ಚ್ 2ರಂದು ಟೂರ್ನಿ ಕಮಿಟಿಯ ಸಭೆ ಕರೆದಿದ್ದೇವೆ. ಈ ವಿಷಯವನ್ನು ಚರ್ಚಿಸಿ ಪರಿಶೀಲಿಸಲಾಗುವುದು. ಅಂಪೈರ್‌ಗಳಿಂದ ವರದಿ ತರಿಸಿ ನೋಡುತ್ತೇವೆ’ ಎಂದು ಸಿಎಬಿ ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಹೃದಯಕ್ಕೆ ಹತ್ತಿರವಾದ ಕ್ರಿಕೆಟ್‌ನಲ್ಲಿ ನಾನು ಆಡಿದ್ದೇನೆ. ಇಂತಹ ಕ್ರೀಡೆಯಲ್ಲಿ ಈ ರೀತಿಯ ಭ್ರಷ್ಟ ಕಾರ್ಯ ನಡೆಯುತ್ತಿರುವುದು ನಾಚಿಕೆಗೇಡು. ಕೋಲ್ಕತ್ತದ ಕ್ರಿಕೆಟ್‌ ಕ್ಲಬ್‌ ಕ್ರಿಕೆಟ್ ಜೀವಾಳವಾಗಿದೆ’ ಎಂದು ಗೋಸ್ವಾಮಿ ಹೇಳಿದ್ಧಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.