ರಣಜಿ ಟ್ರೋಫಿ | 170 ರನ್ನಿಗೆ ಉರುಳಿದ ವಿದರ್ಭ ನಾಗ್ಪುರ: ಆವೇಶ್‌ ಖಾನ್‌ (49ಕ್ಕೆ4) ನೇತೃತ್ವದ ಮಧ್ಯಪ್ರದೇಶ ವೇಗದ ದಾಳಿಗೆ ಸಿಲುಕಿದ ವಿದರ್ಭ ರಣಜಿ ಟ್ರೋಫಿ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ 170 ರನ್‌ಗಳಿಗೆ ಉರುಳಿತು. ಶನಿವಾರ ಮೊದಲ ದಿನದ ಆಟ ಮುಗಿದಾಗ ಮಧ್ಯಪ್ರದೇಶ ಒಂದು ವಿಕೆಟ್‌ಗೆ 47 ರನ್ ಗಳಿಸಿದೆ. ಆವೇಶ್ ಅವರಿಗೆ ಕುಲ್ವಂತ್ ಖೆಜ್ರೋಲಿಯಾ (38ಕ್ಕೆ2) ಮತ್ತು ವೆಂಕಟೇಶ ಅಯ್ಯರ್‌ (28ಕ್ಕೆ2) ಬೆಂಬಲ ನೀಡಿದರು. ಮಧ್ಯಪ್ರದೇಶದ 56.4 ಓವರುಗಳಲ್ಲಿ ಸ್ಪಿನ್ನರ್‌ಗಳು ಕೇವಲ 2.4 ಓವರ್‌ಗಳನ್ನ‌ಷ್ಟೇ ಮಾಡಿದರು. ಬೌಲಿಂಗ್ ಮಾಡಿದ ಏಕೈಕ ಸ್ಪಿನ್ನರ್ ಕುಮಾರ ಕಾರ್ತಿಕೇಯ ಒಂದು ವಿಕೆಟ್ ಪಡೆದರು. ವಿದರ್ಭ ಪರ ಕನ್ನಡಿಗ ಕರುಣ್ ನಾಯರ್ (63, 105 ಎ, 4x9) ಮಾತ್ರ ಪ್ರತಿರೋಧ ತೋರಿದರು. ಅವರನ್ನು ಬಿಟ್ಟರೆ ಆರಂಭ ಆಟಗಾರ ಅಥರ್ವ ತೈಡೆ (39, 63ಎ) ಎರಡನೇ ಅತ್ಯಧಿಕ ಮೊತ್ತ ಗಳಿಸಿದರು. ಸ್ಕೋರುಗಳು: ಮೊದಲ ಇನಿಂಗ್ಸ್: ವಿದರ್ಭ: 56.4 ಓವರುಗಳಲ್ಲಿ 170 (ಅಥವೈ ತೈಡೆ 39, ಕರುಣ್ ನಾಯರ್ 63; ಆವೇಶ್ ಖಾನ್ 49ಕ್ಕೆ4, ಕುಲ್ವಂತ್‌ ಖೆಜ್ರೋಲಿಯಾ 38ಕ್ಕೆ2, ವೆಂಕಟೇಶ ಅಯ್ಯರ್ 28ಕ್ಕೆ2); ಮಧ್ಯಪ್ರದೇಶ: 20 ಓವರುಗಳಲ್ಲಿ 1 ವಿಕೆಟ್‌ಗೆ 47 (ಹಿಮಾಂಶು ಮಂತ್ತಿ ಬ್ಯಾಟಿಂಗ್‌ 26, ಹರ್ಷ ಗಾವಳಿ ಬ್ಯಾಟಿಂಗ್ 10). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.