| ಮೆಗ್‌ ಲ್ಯಾನಿಂಗ್ ಅರ್ಧಶತಕ; ಗುಜರಾತ್‌ಗೆ 164 ರನ್ ಗುರಿ ನೀಡಿದ ಡೆಲ್ಲಿ ಬೆಂಗಳೂರು: ಆರಂಭಿಕ ಆಟಗಾರ್ತಿ ಮೆಗ್ ಲ್ಯಾನಿಂಗ್ ಅವರ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಹೋರಾಟದ ಮೊತ್ತ ಗಳಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಜೈಂಟ್ಸ್ ಎದುರು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 ರನ್ ಗಳಿಸಿತು. ಟಾಸ್ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಧ್ಯಮವೇಗಿ ಮೇಘನಾ ಸಿಂಗ್ (37ಕ್ಕೆ4) ಅವರ ದಾಳಿಗೆ ಡೆಲ್ಲಿ ತಂಡವು ಅಲ್ಪಮೊತ್ತಕ್ಕೆ ಕುಸಿಯು ಆತಂಕ ಎದುರಿಸಿತ್ತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಮೇಘನಾ ಅವರು ಶಫಾಲಿ ವರ್ಮಾ ವಿಕೆಟ್ ಗಳಿಸಿದರು. ಮೂರು ಓವರ್‌ಗಳ ನಂತರ ಅಲೈಸ್ ಕ್ಯಾಪ್ಸಿಗೂ ಡಗ್‌ಔಟ್ ದಾರಿ ತೋರಿಸಿದರು. ಇದರಿಂದಾಗಿ ತಂಡದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ಬಿತ್ತು. ಈ ಪರಿಸ್ಥಿತಿಯನ್ನು ಅನುಭವಿ ಬ್ಯಾಟರ್ ಲ್ಯಾನಿಂಗ್ ಸಮರ್ಥವಾಗಿ ನಿಭಾಯಿಸಿದರು. ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳಿದ್ದ ಅರ್ಧಶತಕ ಗಳಿಸಿದ ಅವರು ತಂಡದ ಮೊತ್ತ ಹೆಚ್ಚಿಸಿದರು. ಜೆಮಿಮಾ ರಾಡ್ರಿಗಸ್ ಕೂಡ ವೈಫಲ್ಯ ಅನುಭವಿಸಿದರು. ಆದರೆ ಅನಾಬೆಲ್ ಸದರ್ಲೆಂಡ್ (20; 12ಎ, 4X2, 6X1) ಮತ್ತು ಕೊನೆಯಲ್ಲಿ ಶಿಖಾ ಪಾಂಡೆ (ಔಟಾಗದೆ 14; 8ಎ, 4X2) ಮಹತ್ವದ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಿತು. ಗುಜರಾತ್ ತಂಡದ ಆ್ಯಷ್ಲೆ ಗಾರ್ಡನರ್ ಅವರೂ ಎರಡು ವಿಕೆಟ್ ಗಳಿಸಿದರು. ಸಂಕ್ಷಿಪ್ತ ಸ್ಕೋರು ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 (ಮೆಗ್ ಲ್ಯಾನಿಂಗ್ 55, ಅಲೈಸ್ ಕ್ಯಾಪ್ಸಿ 27, ಸದರ್ಲೆಂಡ್ 20, ಶಿಖಾ ಪಾಂಡೆ ಔಟಾಗದೆ 14. ಮೇಘನಾ ಸಿಂಗ್ 37ಕ್ಕೆ4, ಆ್ಯಷ್ಲೆ ಗಾರ್ಡನರ್ 37ಕ್ಕೆ2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.