| ಗುಜರಾತ್‌ಗೆ 4ನೇ ಸೋಲು: ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಬೆಂಗಳೂರು: ಅನುಭವಿ ಬ್ಯಾಟರ್‌ ಮೆಗ್ ಲ್ಯಾನಿಂಗ್ ಅರ್ಧಶತಕದ ಹಾಗೂ ಸ್ಪಿನ್ನರ್ ಜೆಸ್ ಯಾನ್ಸೆನ್ ಅವರ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಜಯ ಗಳಿಸಿತು. ಗುಜರಾತ್ ಜೈಂಟ್ಸ್ ತಂಡವು ಸತತ ನಾಲ್ಕನೇ ಪಂದ್ಯದಲ್ಲಿ ಸೋತಿತು. 25 ರನ್‌ಗಳಿಂದ ಜಯಿಸಿದ ಡೆಲ್ಲಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಜೈಂಟ್ಸ್ ಎದುರು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 ರನ್ ಗಳಿಸಿತು. ಅದಕ್ಕುತ್ತರವಾಗಿ ಗುಜರಾತ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 138 ರನ್ ಗಳಿಸಿತು. ಜೆಸ್ ಯಾನ್ಸೆನ್ (22ಕ್ಕೆ3) ಮತ್ತು ರಾಧಾ ಯಾದವ್ (20ಕ್ಕೆ3) ಅವರ ದಾಳಿಯ ಮುಂದೆ ಗುಜರಾತ್ ತಂಡವು ಸೋಲಿನ ಹಾದಿ ಹಿಡಿಯಿತು. ಟಾಸ್ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಧ್ಯಮವೇಗಿ ಮೇಘನಾ ಸಿಂಗ್ (37ಕ್ಕೆ4) ಅವರ ದಾಳಿಗೆ ಡೆಲ್ಲಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತ್ತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಮೇಘನಾ ಅವರು ಶಫಾಲಿ ವರ್ಮಾ ವಿಕೆಟ್ ಗಳಿಸಿದರು. ಮೂರು ಓವರ್‌ಗಳ ನಂತರ ಅಲೈಸ್ ಕ್ಯಾಪ್ಸಿಗೂ ಡಗ್‌ಔಟ್ ದಾರಿ ತೋರಿಸಿದರು. ಇದರಿಂದಾಗಿ ತಂಡದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ಬಿತ್ತು. ಈ ಪರಿಸ್ಥಿತಿಯನ್ನು ಅನುಭವಿ ಬ್ಯಾಟರ್ ಲ್ಯಾನಿಂಗ್ ಸಮರ್ಥವಾಗಿ ನಿಭಾಯಿಸಿದರು. ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳಿದ್ದ ಅರ್ಧಶತಕ ಗಳಿಸಿದ ಅವರು ತಂಡದ ಮೊತ್ತ ಹೆಚ್ಚಿಸಿದರು. ಜೆಮಿಮಾ ರಾಡ್ರಿಗಸ್ ಕೂಡ ವೈಫಲ್ಯ ಅನುಭವಿಸಿದರು. ಆದರೆ ಅನಾಬೆಲ್ ಸದರ್ಲೆಂಡ್ (20; 12ಎ, 4X2, 6X1) ಮತ್ತು ಕೊನೆಯಲ್ಲಿ ಶಿಖಾ ಪಾಂಡೆ (ಔಟಾಗದೆ 14; 8ಎ, 4X2) ಮಹತ್ವದ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಿತು. ಗುಜರಾತ್ ತಂಡದ ಆ್ಯಷ್ಲೆ ಗಾರ್ಡನರ್ (37ಕ್ಕೆ2 ಹಾಗೂ 40 ರನ್) ಆಲ್‌ರೌಂಡ್ ಅಟವಾಡಿದರು. ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 (ಮೆಗ್ ಲ್ಯಾನಿಂಗ್ 55, ಅಲೈಸ್ ಕ್ಯಾಪ್ಸಿ 27, ಸದರ್ಲೆಂಡ್ 20, ಶಿಖಾ ಪಾಂಡೆ ಔಟಾಗದೆ 14. ಮೇಘನಾ ಸಿಂಗ್ 37ಕ್ಕೆ4, ಆ್ಯಷ್ಲೆ ಗಾರ್ಡನರ್ 37ಕ್ಕೆ2) ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 138 (ಆ್ಯಷ್ಲೆ ಗಾರ್ಡನರ್ 40, ತನುಜಾ ಕನ್ವರ್ 13, ಫೋಬೆ ಲಿಚವವಫೀಲ್ಡ್ 15, ಜೆಸ್ ಯಾನ್ಸೆನ್ 22ಕ್ಕೆ3, ರಾಧಾ ಯಾದವ್ 20ಕ್ಕೆ3) ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 25 ರನ್ ಜಯ ಪಂದ್ಯ ಆಟಗಾರ್ತಿ: ಜೆಸ್ ಯಾನ್ಸೆನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.