ಡಬ್ಲ್ಯುಪಿಎಲ್: ಆರ್‌ಸಿಬಿಗೆ ಕಠಿಣ ಗುರಿಯೊಡ್ಡಿದ ಡೆಲ್ಲಿ ಕ್ಯಾಪಿಟಲ್ಸ್ ನವದೆಹಲಿ: ಬಿರುಸಿನ ಬ್ಯಾಟಿಂಗ್ ಮಾಡಿದ ಜೆಮಿಮಾ ರಾಡ್ರಿಗಸ್ ಮತ್ತು ಅಲೈಸ್ ಕ್ಯಾಪ್ಸ್ ಅವರ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 181 ರನ್ ಗಳಿಸಿತು. ಮೆಗ್ ಲ್ಯಾನಿಂಗ್ (29; 26ಎ) ಮತ್ತು ಶಫಾಲಿ ವರ್ಮಾ (23; 18ಎ) ಮೊದಲ ಪವರ್‌ಪ್ಲೇನಲ್ಲಿ 54 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಏಳನೇ ಓವರ್‌ನಲ್ಲಿ ಶಫಾಲಿ ವಿಕೆಟ್ ಗಳಿಸಿದ ಆಶಾ ಶೋಭನಾ ಮಿಂಚಿದರು. ನಂತರದ ಓವರ್‌ನಲ್ಲಿ ಶ್ರೇಯಾಂಕಾ ಪಾಟೀಲ ಅವರು ಲ್ಯಾನಿಂಗ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಈ ಹಂತದಲ್ಲಿ ಜೊತೆಗೂಡಿದ ಜೆಮಿಮಾ (58; 36ಎ, 4X8, 6X1) ಮತ್ತು ಕ್ಯಾಪ್ಸಿ (48; 32ಎ, 4X8) ಮೂರನೇ ವಿಕೆಟ್ ಜೊತೆಯಾಟದಲ್ಲಿ 97 ರನ್‌ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು ಹಿಗ್ಗಿತು. ಜಿಮಿಮಾ ಅವರ ಆಟವು ಆಕರ್ಷಕವಾಗಿತ್ತು. ಫ್ರಂಟ್‌ಫುಟ್ ಡ್ರೈವ್, ಸ್ವೀಪ್‌ ಮತ್ತು ಪಂಚ್‌ಗಳು ಗಮನ ಸೆಳೆದವು. ಟೂರ್ನಿಯಲ್ಲಿ ಇದು ಅವರ ಎರಡನೇ ಅರ್ಧಶತಕವಾಗಿದೆ. 18ನೇ ಓವರ್‌ನಲ್ಲಿ ಜಿಮಿಮಾ ಅವರನ್ನು ಕ್ಲೀನ್‌ಬೌಲ್ಡ್‌ ಮಾಡುವಲ್ಲಿ ಸಫಲರಾದ ಶ್ರೇಯಾಂಕಾ ಜೊತೆಯಾಟವನ್ನೂ ಮುರಿದರು. ಇನಿಂಗ್ಸ್‌ನ ಕೊನೆಯ ಓವರ್‌ ಬೌಲಿಂಗ್ ಮಾಡಿದ ಶ್ರೇಯಾಂಕಾ ಅವರು ಕ್ಯಾಪ್ಸಿ ಮತ್ತು ಜೆಸ್ ಯಾನ್ಸೆನ್ ವಿಕೆಟ್‌ಗಳನ್ನೂ ತಮ್ಮದಾಗಿಸಿಕೊಂಡರು. ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 181 (ಮೆಗ್ ಲ್ಯಾನಿಂಗ್ 29, ಶಫಾಲಿ ವರ್ಮಾ 23, ಜೆಮಿಮಾ ರಾಡ್ರಿಗಸ್ 58, ಅಲೈಸ್ ಕ್ಯಾಪ್ಸಿ 48, ಮೆರಿಝಾನೆ ಕಾಪ್ ಔಟಾಗದೆ 12, ಶ್ರೇಯಾಂಕಾ ಪಾಟೀಲ 26ಕ್ಕೆ4) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.