ಕುತೂಹಲ ಮೂಡಿಸಿದ ಎಂ.ಎಸ್. ಧೋನಿ ಫೇಸ್‌ಬುಕ್ ಪೋಸ್ಟ್‌ ಬೆಂಗಳೂರು: ಇನ್ನೇನು 2024 ನೇ ಸಾಲಿನ ಐಪಿಎಲ್ ಟೂರ್ನಿಗೆ ದಿನಗಣನೆ ಪ್ರಾರಂಭವಾಗಿದ್ದು, ಇದೇ 22ರಿಂದ ಐಪಿಎಲ್ ‍ಪಂದ್ಯಗಳು ಶುರುವಾಗಲಿವೆ. ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ ಆಟಗಾರ ಎಂ.ಎಸ್. ಧೋನಿ ಅವರು ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್ ಒಂದು ಗಮನ ಸೆಳೆದಿದೆ. ‘ಕಾಯಲಾಗುತ್ತಿಲ್ಲ, ಈ ಹೊಸ ಸೀಸನ್‌ಗೆ ಮತ್ತು ಬರಲಿರುವ ನನ್ನ ಹೊಸ ಜವಾಬ್ದಾರಿಗೆ’, ಕಾಯುತ್ತಾ ಇರೀ.. (' ''. !) ಎಂದು ಬರೆದುಕೊಂಡಿದ್ದಾರೆ. ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಧೋನಿ ಅವರ ಈ ಪೋಸ್ಟ್ ಸಾಕಷ್ಟು ಗಮನ ಸೆಳೆದಿದ್ದು ಈ ಐಪಿಎಲ್‌ನಲ್ಲಿ ಧೋನಿ ಅವರ ಪಾತ್ರ ಏನಾಗಿರಲಿದೆ? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಕಳೆದ ವರ್ಷ ಐಪಿಎಲ್‌ನಿಂದ ನಿವೃತ್ತಿಯಾಗುವ ಸೂಚನೆಯನ್ನು ಧೋನಿ ನೀಡಿದ್ದರು. ಅಲ್ಲದೇ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಧೋನಿ ಅವರು ಚೆನ್ನೈ ತಂಡಕ್ಕೆ ಕೋಚ್ ಆಗಬಹುದು ಅಥವಾ ಮೆಂಟರ್ ಆಗಬಹುದು ಎಂದು ಹಲವರು ಹೇಳಿದ್ದರೆ, ಧೋನಿ ಅವರೇ ಚೆನ್ನೈ ತಂಡಕ್ಕೆ ಹೊಸ ನಾಯಕನನ್ನು ಘೋಷಣೆ ಮಾಡಲಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಧೋನಿ ಅವರು ಈ ಐಪಿಎಲ್‌ನಲ್ಲೂ ಆಡಬಹುದು ಎಂದು ಅವರ ಫೇಸ್‌ಬುಕ್ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. 2008ರಲ್ಲಿ ಐಪಿಎಲ್ ಪದಾರ್ಪಣೆ ಮಾಡಿರುವ ಧೋನಿ ಅವರು, ಆಗಿನಿಂದಲೂ ಚೆನ್ನೈ ತಂಡದ ಜೊತೆ ಗುರುತಿಸಿಕೊಂಡಿದ್ದಾರೆ. 250 ಐಪಿಎಲ್ ಪಂದ್ಯಗಳನ್ನು ಆಡಿರುವ ಅವರು 5,082 ರನ್ ಹೊಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.