2024: ಗೆಲುವಿನ ಹಾದಿಗೆ ಮರಳಿದ ಬೆಂಗಳೂರು ಬೆಂಗಳೂರು: ಉದ್ಯಾನನಗರಿಯ ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಎಲಿಸ್ ಪೆರಿ ಅವರ ಜೊತೆಯಾಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯದ ಹಾದಿಗೆ ಮರಳಿತು. ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಲೆಗ್‌ನ ಕೊನೆಯ ಪಂದ್ಯದಲ್ಲಿ ಆರ್‌ಸಿಬಿಯು 23 ರನ್‌ಗಳಿಂದ ಯು.ಪಿ. ವಾರಿಯರ್ಸ್ ವಿರುದ್ಧ ಜಯಿಸಿತು. ಟೂರ್ನಿಯ ಕಳೆದ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಸೋತಿತ್ತು. ತಂಡವು ಇಲ್ಲಿ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯಿಸಿತು. ಇದರಲ್ಲಿ ಒಟ್ಟು 373 ರನ್‌ಗಳು ಹರಿದವು. 11 ವಿಕೆಟ್‌ಗಳು ಪತನವಾದವು. ಪಂದ್ಯ ಗೆದ್ದ ನಂತರ ಆರ್‌ಸಿಬಿ ಆಟಗಾರ್ತಿಯರು ಮೈದಾನದಲ್ಲಿ ಒಂದು ಸುತ್ತು ಹಾಕಿ ಗ್ಯಾಲರಿಯಲ್ಲಿದ್ದ 24 ಸಾವಿರಕ್ಕೂ ಹೆಚ್ಚು ಅಭಿಮಾನಿಗಳತ್ತ ಕೈಬೀಸಿ, ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಾರಿಯರ್ಸ್ ಲೆಕ್ಕಾಚಾರ ತಲೆಕೆಳಗಾಯಿತು. ಮಂದಾನ (80; 50ಎಸೆತ) ಹಾಗೂ ಎಲಿಸ್ ಪೆರಿ (58; 37ಎ) ಜೊತೆಗೂಡಿ ಸೇರಿಸಿದ 97 ರನ್‌ಗಳ ಜೊತೆಯಾಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 198 ರನ್‌ಗಳ ದೊಡ್ಡ ಮೊತ್ತ ಪೇರಿಸಿತು. ಅದಕ್ಕುತ್ತರವಾಗಿ ವಾರಿಯರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 175 ರನ್ ಗಳಿಸಿತು. ಅಲಿಸಾ ಹೀಲಿ (55; 38ಎ, 4X7, 6X3) ಅರ್ಧಶತಕ ದಾಖಲಿಸಿದರು. ಆರ್‌ಸಿಬಿಗೆ ಸಬಿನೇನಿ ಮೇಘನಾ (28; 21ಎ, 4X5) ಮತ್ತು ಸ್ಮೃತಿ ಉತ್ತಮ ಆರಂಭ ನೀಡಿದರು. ಕೇವಲ 5.2 ಓವರ್‌ಗಳಲ್ಲಿ 51 ರನ್ ಸೇರಿಸಿದರು. ಮೇಘನಾ ಔಟಾದ ನಂತರ ಮಂದಾನ ಜೊತೆಗೆ ಸೇರಿಕೊಂಡ ಎಲಿಸ್ ಪೆರಿ ರನ್‌ಗಳ ಹೊಳೆ ಹರಿಸಿದರು. ಸ್ಮೃತಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ ಬಾರಿಸಿದರು. ಟೂರ್ನಿಯಲ್ಲಿ ವೈಯಕ್ತಿಕ ಗರಿಷ್ಟ ರನ್ ಗಳಿಸಿದ ಬ್ಯಾಟರ್ ಆದರು. 8ನೇ ಓವರ್‌ನಲ್ಲಿ ಫೀಲ್ಡರ್ ಚಾಮರಿ ಅಟ್ಟಪಟ್ಟು ಮತ್ತು 16ನೇ ಓವರ್‌ನಲ್ಲಿ ಸೋಫಿ ಎಕ್ಸೆಲ್‌ಸ್ಟೋನ್ ಅವರು ಕ್ಯಾಚ್‌ ಕೈಚೆಲ್ಲಿದ್ದರಿಂದ ಜೀವದಾನ ಪಡೆದ ಮಂದಾನ ಮಿಂಚಿದರು. ಗುರಿ ಬೆನ್ನಟ್ಟಿದ ವಾರಿಯರ್ಸ್ ತಂಡದ ಆರಂಭ ನಿಧಾನವಾಯಿತು. ಮೊದಲ ಓವರ್ ಹಾಕಿದ ಮಧ್ಯಮವೇಗಿ ರೇಣುಕಾಸಿಂಗ್ ಮೇಡನ್ ಮಾಡಿದರು. ನಂತರ ಹೀಲಿ ಬೀಸಾಟಕ್ಕೆ ಬೌಲರ್‌ಗಳು ಬಸವಳಿದರು. ಅವರ ಆಟದಿಂದಾಗಿ ವಾರಿಯರ್ಸ್‌ಗೆ ಗೆಲುವಿನ ವಿಶ್ವಾಸ ಮೂಡಿತ್ತು. ಆದರೆ 13ನೇ ಓವರ್‌ನಲ್ಲಿ ಆರ್‌ಸಿಬಿ ವಿಕೆಟ್‌ಕೀಪರ್ ರಿಚಾ ಘೋಷ್ ಅವರ ಚುರುಕಿನ ಸ್ಟಂಪಿಂಗ್‌ನಿಂದಾಗಿ ಹೀಲಿ ಔಟಾದರು. ಆತಿಥೇಯ ಬೌಲರ್‌ಗಳೂ ಮಿಂಚಿದರು. ಸಂಕ್ಷಿಪ್ತ ಸ್ಕೋರು: ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 198 (ಎಸ್. ಮೇಘನಾ 28, ಸ್ಮೃತಿ ಮಂದಾನ 80, ಎಲಿಸ್ ಪೆರಿ 58, ರಿಚಾ ಘೋಷ್ ಔಟಾಗದೆ 21, ಸೋಫಿ ಡಿವೈನ್ ಔಟಾಗದೆ 2) ಯು.ಪಿ. ವಾರಿಯರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 175 (ಅಲಿಸಾ ಹೀಲಿ 55, ಕಿರಣ್ ನವಗಿರೆ 18, ದೀಪ್ತಿ ಶರ್ಮಾ 33, ಪೂನಂ ಖೆಮ್ನಾರ್ 31, ಸೋಫಿ ಡಿವೈನ್ 37ಕ್ಕೆ2, ಆಶಾ ಶೋಭನಾ 29ಕ್ಕೆ2, ಸೋಫಿ ಮಾಲಿನೆ 29ಕ್ಕೆ2, ಜಾರ್ಜಿಯಾ ವೆರ್ಹಾಮ್ 38ಕ್ಕೆ2) ಫಲಿತಾಂಶ: ಆರ್‌ಸಿಬಿಗೆ 23 ರನ್‌ಗಳ ಜಯ. ಇಂದಿನ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್–ಮುಂಬೈ ಇಂಡಿಯನ್ಸ್ ಸ್ಥಳ: ನವದೆಹಲಿ ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ ಆ್ಯಪ್. ಆರಂಭ: ರಾತ್ರಿ 7.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.