ರಣಜಿ ಟ್ರೋಫಿ 2024: ಮಧ್ಯಪ್ರದೇಶ ಮಣಿಸಿ ಫೈನಲ್‌ ಪ್ರವೇಶಿಸಿದ ವಿದರ್ಭ ನಾಗ್ಪುರ: ವೇಗದ ಬೌಲರ್‌ಗಳಾದ ಆದಿತ್ಯ ಠಾಕರೆ (45ಕ್ಕೆ2) ಮತ್ತು ಯಶ್‌ ಠಾಕೂರ್‌ (60ಕ್ಕೆ3) ಅವರು ಮಧ್ಯಪ್ರದೇಶದ ಬಾಲಂಗೋಚಿಗಳ ವಿಕೆಟ್‌ಗಳನ್ನು ಬೇಗನೇ ಪಡೆದರು. ವಿದರ್ಭ ತಂಡ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದ ಐದನೇ ಹಾಗೂ ಅಂತಿಮ ದಿನವಾದ ಬುಧವಾರ 62 ರನ್‌ಗಳಿಂದ ಮಧ್ಯಪ್ರದೇಶ ತಂಡವನ್ನು ಸೋಲಿಸಿತು. ವಿದರ್ಭ ಮಾರ್ಚ್‌ 10ರಿಂದ ಮುಂಬೈನ ಬಿಕೆಸಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ. ಗೆಲುವಿಗೆ 321 ರನ್‌ಗಳ ಗುರಿ ಎದುರಿಸಿದ್ದ ಮಧ್ಯಪ್ರದೇಶ ಮಂಗಳವಾರ, ನಾಲ್ಕನೇ ದಿನದಾಟದ ಕೊನೆಗೆ 6 ವಿಕೆಟ್‌ಗೆ 228 ರನ್ ಗಳಿಸಿ ಹೋರಾಟದ ವಿಶ್ವಾಸದಲ್ಲಿತ್ತು. ಆದರೆ ಆದಿತ್ಯ ಮತ್ತು ಯಶ್ ದಾಳಿಗೆ ಸಿಲುಕಿದ ಮಧ್ಯಪ್ರದೇಶ ಹೋರಾಟ ತೋರದೇ 81.3 ಓವರುಗಳಲ್ಲಿ 258 ರನ್‌ಗಳಿಗೆ ಆಲೌಟ್‌ ಆಯಿತು. ಮೂರನೇ ಬಾರಿ ಫೈನಲ್ ತಲುಪುವ ಕನಸು ಭಗ್ನಗೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 88 ರನ್‌ಗಳಿಂದ ಹಿಂದುಳಿದಿದ್ದರೂ ಚೇತರಿಸಿಕೊಂಡ ಆತಿಥೇಯ ವಿದರ್ಭ ಸ್ಮರಣೀಯ ಗೆಲುವು ದಾಖಲಿಸಿತು. ವಿದರ್ಭ ಮೂರನೇ ಬಾರಿ ಫೈನಲ್‌ಗೇರಿದ್ದು, ಈ ಹಿಂದಿನ ಎರಡೂ ಸಂದರ್ಭಗಳಲ್ಲಿ ಫೈನಲ್ ತಲುಪಿತ್ತು. 2017–18ರಲ್ಲಿ ದೆಹಲಿ ತಂಡವನ್ನು, 2018–19 ರಲ್ಲಿ ಸೌರಾಷ್ಟ್ರ ತಂಡವನ್ನು ಸೋಲಿಸಿತ್ತು. ಕುಮಾರ ಕಾರ್ತಿಕೇಯ (0) ದಿನದ ನಾಲ್ಕನೇ ಎಸೆತದಲ್ಲಿ ಠಾಕರೆ ಎಸೆತದಲ್ಲಿ ಬೌಲ್ಡ್ ಆದರು. ಅನುಭವ ಅಗರವಾಲ್ ಕೂಡ ಇದೇ ರೀತಿ ನಿರ್ಗಮಿಸಿದಾಗ ಮೊತ್ತ 8 ವಿಕೆಟ್‌ಗೆ 234. ವಿದರ್ಭ ಗೆಲುವು ಖಚಿತವಾಯಿತು. ಮಂಗಳವಾರ 16 ರನ್ ಗಳಿಸಿದ್ದ ಸಾರಾಂಶ್ ಜೈನ್ ಆ ಮೊತ್ತಕ್ಕೆ 9 ರನ್ ಸೇರಿಸುವಷ್ಟರಲ್ಲಿ ಯಶ್ ಠಾಕೂರ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಕೊನೆಯವರಾಗಿ ಕುಲವಂತ್‌ ಖೆಜ್ರೊಲಿಯಾ (11) ಕೂಡ ಬೌಲ್ಡ್‌ ಆದರು. ಸ್ಕೋರುಗಳು: ಮೊದಲ ಇನಿಂಗ್ಸ್‌: ವಿದರ್ಭ: 170, ಮಧ್ಯಪ್ರದೇಶ: 252; ಎರಡನೇ ಇನಿಂಗ್ಸ್‌: ವಿದರ್ಭ: 402; ಮಧ್ಯಪ್ರದೇಶ: 81.3 ಓವರುಗಳಲ್ಲಿ 258 (ಸಾರಾಂಶ್ ಜೈನ್ 25; ಆದಿತ್ಯ ಸರ್ವಟೆ 56ಕ್ಕೆ2, ಅದಿತ್ಯ ಥಾಕರೆ 45ಕ್ಕೆ2, ಯಶ್‌ ಠಾಕೂರ್‌ 60ಕ್ಕೆ3, ಅಕ್ಷಯ್ ವಾಖರೆ 34ಕ್ಕೆ2). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.