2024: ಆರ್‌ಸಿಬಿ ಬೌಲರ್‌ಗಳೆದುರು ಮೆರೆದ ಲೌರಾ, ಮೂನಿ; ಜೈಂಟ್ಸ್ ಬೃಹತ್ ಮೊತ್ತ ನವದೆಹಲಿ: ಗುಜರಾತ್ ಜೈಂಟ್ಸ್‌ ತಂಡದ ಆರಂಭಿಕ ಬ್ಯಾಟರ್‌ಗಳಾದ ಲೌರಾ ವೊಲ್ವಾರ್ಡ್ಟ್‌ ಹಾಗೂ ಬೆತ್‌ ಮೂನಿ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ರಸದೌತಣ ಬಡಿಸಿದರು. ಚೆಂಡನ್ನು ಮೈದಾನದ ಮೂಲೆಮೂಲೆಗೆ ಅಟ್ಟಿದ ಈ ಜೋಡಿ, ತಮ್ಮ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಟಿ20 ಪಂದ್ಯದಲ್ಲಿ ಬೃಹತ್‌ ಮೊತ್ತ ಕಲೆಹಾಕಲು ನೆರವಾದರು. ಮಹಿಳಾ ಪ್ರೀಮಿಯರ್ ಲೀಗ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಜೈಂಟ್ಸ್‌ ನಾಯಕಿ ಮೂನಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಲೌರಾ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಅವರು, ಆರ್‌ಸಿಬಿ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದರು. ಹೀಗಾಗಿ, ಜೈಂಟ್ಸ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 199 ರನ್‌ ಗಳಿಸಿತು. ಮೊದಲ ಓವರ್‌ನಿಂದಲೇ ಬೀಸಾಟಕ್ಕೆ ಒತ್ತು ನೀಡಿದ ಇವರಿಬ್ಬರು, ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ ಕೇವಲ 13 ಓವರ್‌ಗಳಲ್ಲಿ 140 ರನ್ ಕಲೆಹಾಕಿದರು. ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಏಳು ಬೌಲರ್‌ಗಳನ್ನು ಪ್ರಯೋಗಿಸಿದರೂ, ಇವರು ರನ್‌ ಹೊಳೆ ಹರಿಸುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 45 ಎಸೆತಗಳನ್ನು ಎದುರಿಸಿದ ಲೌರಾ 76 ರನ್‌ ಗಳಿಸಿದ್ದಾಗ ರನೌಟ್‌ ಆದರು. ನಂತರ ಬಂದ ಯಾವೊಬ್ಬ ಆಟಗಾರ್ತಿಯೂ ಪರಿಣಾಮಕಾರಿಯಾಗಿ ಬ್ಯಾಟ್‌ ಬೀಸಲಿಲ್ಲ. ಮೂರನೇ ಕ್ರಮಾಂಕದ ಬ್ಯಾಟರ್‌ ಫೊಯೆಬೆ ಲಿಚ್‌ಫೀಲ್ಡ್‌ 18 ರನ್ ಗಳಿಸಿದರೆ, ಆಷ್ಲೇ ಗಾರ್ಡನರ್‌ ಸೊನ್ನೆ ಸುತ್ತಿದರು. ದಯಾಳನ್‌ ಹೇಮಲತಾ, ವೇದಾ ಕೃಷ್ಣಮೂರ್ತಿ ಹಾಗೂ ಕ್ಯಾಥರಿನ್‌ ಬ್ರೈಸ್‌ (ಅಜೇಯ) ತಲಾ ಒಂದೊಂದು ರನ್‌ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ 200ಕ್ಕಿಂತ ಅಧಿಕ ರನ್‌ ಗಳಿಸುವ ಜೈಂಟ್ಸ್‌ ಪಡೆಯ ಆಸೆ ಈಡೇರಲಿಲ್ಲ. ಕೊನೆವರೆಗೂ ಆಡಿದ ಮೂನಿ, 51 ಎಸೆತಗಳಲ್ಲಿ 85 ರನ್ ಬಾರಿಸಿ ಅಜೇಯವಾಗಿ ಉಳಿದರು. ಅವರ ಇನಿಂಗ್ಸ್‌ನಲ್ಲಿ 1 ಸಿಕ್ಸರ್‌ ಮತ್ತು 12 ಬೌಂಡರಿಗಳಿದ್ದವು. ಆರ್‌ಸಿಬಿಗೆ ಆಘಾತ ಬೃಹತ್‌ ಗುರಿ ಬೆನ್ನತ್ತಿರುವ ಆರ್‌ಸಿಬಿಗೆ ಆರಂಭಿಕ ಆಘಾತ ಎದುರಾಗಿದೆ. ಬೀಸಾಟವಾಡುತ್ತಿದ್ದ ನಾಯಕಿ ಸ್ಮೃತಿ ಮಂದಾನ 5ನೇ ಓವರ್‌ನ ಮೊದಲ ಎಸೆತದಲ್ಲಿ ಔಟಾಗಿದ್ದಾರೆ. 16 ಎಸೆತಗಳನ್ನು ಎದುರಿಸಿದ ಅವರು ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ ಸಹಿತ 24 ರನ್‌ ಗಳಿಸಿದ್ದ ವೇಳೆ ಗಾರ್ಡನರ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಸದ್ಯ ಎಲಿಸ್‌ ಪೆರಿ ಕ್ರೀಸ್‌ಗಿಳಿದಿದ್ದಾರೆ. ಇನ್ನೊಂದು ತುದಿಯಲ್ಲಿ ಸಬ್ಬಿನೇನಿ ಮೇಘನಾ ರಕ್ಷಣಾತ್ಮಕ ಆಟದ ಮೊರೆಹೋಗಿದ್ದು, 10 ಎಸೆತಗಳಲ್ಲಿ 2 ರನ್ ಗಳಿಸಿದ್ದಾರೆ. ತಂಡದ ಮೊತ್ತ 5 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್‌ಗೆ 32 ರನ್ ಆಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.