ಈ ಕಪ್ ಆರ್‌ಸಿಬಿ ಅಭಿಮಾನಿಗಳಿಗೆ: ಶ್ರೇಯಾಂಕ ಪಾಟೀಲ ನವದೆಹಲಿ: ‘ಈ ಸಲ ಕಪ್ ನಮ್ದೆ ಎಂದು ಅವರು (ಪುರುಷರ ತಂಡ) ಹೇಳುತ್ತಲೇ ಇದ್ದರು. ನಾವು ಈಗ ಗೆದ್ದೆವು. ಇದು ಅಭಿಮಾನಿಗಳಿಗೆ ಸಮರ್ಪಣೆ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ ಹೇಳಿದರು. ಫೈನಲ್ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಂಡದಲ್ಲಿ ಪರಸ್ಪರ ಎಲ್ಲರೂ ಕುಟುಂಬದ ಸದಸ್ಯರಂತೆ ಇದ್ದೆವು. ಮುಖ್ಯ ಕೋಚ್ ಲೂಕ್ ವಿಲಿಯಮ್ಸ್ ಅವರು ತಂಡದಲ್ಲಿ ಸಮಚಿತ್ತ ನೆಲೆಸುವಂತೆ ಮಾಡಿದವರು. ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಗೆದ್ದಾಗ ಭಾವುಕರಾಗಿ ಕಣ್ಣೀರು ಹಾಕಿದ್ದೆವು. ಈ ಪಂದ್ಯದಲ್ಲಿಯೂ ಅಂತಹದೊಂದು ಆನಂದ ಅನುಭವಿಸುವ ಇರಾದೆ ಇತ್ತು’ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಎಲಿಸ್ ಪೆರಿ ‘ಪಂದ್ಯಕ್ಕೆ ಮುಖ್ಯ ತಿರುವು ನೀಡಿದ್ದ ಸೋಫಿ ಮಾಲಿನೊ. ಶ್ರೇಯಾಂಕ ಚಿಕ್ಕ ವಯಸ್ಸಿನ ಆಟಗಾರ್ತಿ. ಆದರೆ ಪಂದ್ಯ ಗೆಲ್ಲಿಸಬಲ್ಲ ಛಲಗಾತಿ. ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.