ಡಬ್ಲ್ಯುಪಿಎಲ್ ಫೈನಲ್ ಇಂದು: ಸ್ಮೃತಿ ಬಳಗಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು ನವದೆಹಲಿ: ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡ ಈಗ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯದ ಕನಸು ಕಾಣುತ್ತಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಲೀಗ್ ಹಂತದಲ್ಲಿ ಉತ್ತಮವಾಗಿ ಆಡಿ ಪ್ಲೇ ಆಫ್‌ ತಲುಪುವಲ್ಲಿ ಆರ್‌ಸಿಬಿ ಯಶಸ್ವಿಯಾಗಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಹೋದ ವರ್ಷದ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ರೋಚಕ ಜಯ ಸಾಧಿಸಿದ ಸ್ಮೃತಿ ಬಳಗವು ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆಸ್ಟ್ರೇಲಿಯಾದ ದಂತಕಥೆ ಎಲಿಸ್ ಪೆರಿ, ಆಲ್‌ರೌಂಡರ್ ಸೋಫಿ ಮಾಲಿನೆ, ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ ಅವರ ಛಲದ ಆಟದ ಮುಂದೆ ಮುಂಬೈ ಸೋತಿತ್ತು. ಇದೀಗ ಹೋದ ಸಲದ ರನ್ನರ್ಸ್ ಅಪ್ ತಂಡವನ್ನು ಮಣಿಸಿ ಕಿರೀಟ ಧರಿಸುವ ಛಲದಲ್ಲಿ ತಂಡವಿದೆ. ಮೆಗ್‌ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ತಂಡವನ್ನು ಮಣಿಸುವುದು ಸುಲಭವಲ್ಲ. ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಮಂದಾನ ಬಳಗವು ಡೆಲ್ಲಿಗೆ ಮಣಿದಿತ್ತು. ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಅಲೈಸ್ ಕ್ಯಾಪ್ಸಿ ಅವರು ಅಮೋಘ ಲಯದಲ್ಲಿದ್ದಾರೆ. ಆರ್‌ಸಿಬಿ ತಂಡದಲ್ಲಿ ಎಲಿಸ್ ಪೆರಿ ಅವರು ನಿರಂತರವಾಗಿ ಆಲ್‌ರೌಂಡ್ ಆಟವಾಡುತ್ತಿದ್ದಾರೆ. ಆರೇಂಕ್ ಕ್ಯಾಪ್ ಧರಿಸಿದ್ದಾರೆ. ಸ್ಮೃತಿ ಮಂದಾನ ಮತ್ತು ಸೋಫಿ ಅವರು ಉತ್ತಮ ಆರಂಭ ನೀಡಿದರೆ ಗೆಲುವು ಸುಲಭವಾಗಬಹುದು. ಆದರೆ ಡೆಲ್ಲಿ ತಂಡದ ಬೌಲಿಂಗ್ ಪಡೆಯು ಬಲಿಷ್ಠವಾಗಿದ್ದು ಎದುರಿಸಿ ನಿಲ್ಲುವುದೇ ಪ್ರಮುಖ ಸವಾಲಾಗಲಿದೆ. ಆರ್‌ಸಿಬಿ ಬೌಲರ್ ರೇಣುಕಾ ಸಿಂಗ್, ಆಶಾ ಶೋಭನಾ ಮತ್ತು ಶ್ರೇಯಾಂಕ ಅವರು ಇನಿಂಗ್ಸ್‌ನ ಕೊನೆಯ ಹಂತದ ಓವರ್‌ಗಳಲ್ಲಿ ಹೆಚ್ಚು ರನ್ ಕೊಡದೇ ವಿಕೆಟ್‌ ಬೇಟೆಯಾಡಿದರೆ ಡೆಲ್ಲಿ ತಂಡವನ್ನು ಕಟ್ಟಿಹಾಕಬಹುದು. ಮುಂಬೈ ಎದುರಿಗೆ ಇದೇ ತಂತ್ರಗಾರಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಸ್ಮೃತಿ ಬಳಗವು ಜಯಿಸಿತ್ತು. ಶ್ರೇಯಾಂಕ ಪಾಟೀಲ ತಂಡಗಳು ಆರ್‌ಸಿಬಿ: ಸ್ಮೃತಿ ಮಂದಾನ (ನಾಯಕಿ) ರಿಚಾ ಘೋಷ್ (ವಿಕೆಟ್‌ಕೀಪರ್) ಸೋಫಿ ಡಿವೈನ್ ಹೀಥರ್ ನೈಟ್ ಸಿಮ್ರನ್ ಬಹಾದ್ದೂರ್ ಸೋಫಿ ಡಿವೈನ್ ಶ್ರೇಯಾಂಕಾ ಪಾಟೀಲ ಎಲಿಸ್ ಪೆರಿ ಸೋಫಿ ಮಾಲಿನೆ ರೇಣುಕಾ ಸಿಂಗ್ ಜಾರ್ಜಿಯಾ ವೆರ್ಹಾಮ್ ಆಶಾ ಶೋಭನಾ ಏಕತಾ ಬಿಷ್ಠ ಎಸ್. ಮೇಘನಾ ಇಂದ್ರಾಣಿ ರಾಯ್ ಸತೀಶ್ ಶುಭಾ ದಿಶಾ ಕಸತ್ ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ) ತನಿಯಾ ಭಾಟಿಯಾ (ವಿಕೆಟ್‌ ಕೀಪರ್) ಲಾರಾ ಹ್ಯಾರಿಸ್ ಜೆಮಿಮಾ ರಾಡ್ರಿಗಸ್ ಶಫಾಲಿ ವರ್ಮಾ ಅಲೈಸ್ ಕ್ಯಾಪ್ಸಿ ಮರಿಝಾನೆ ಕಾಪ್ ಶಿಖಾ ‍ಪಾಂಡೆ ಅನಾಬೆಲ್ ಸದರ್ಲೆಂಡ್ ಜೆಸ್ ಯಾನ್ಸೆನ್ ಮಿನು ಮಣಿ ಪೂನಮ್ ಯಾದವ್ ಅರುಂಧತಿ ರೆಡ್ಡಿ ತಿತಾಸ್ ಸಾಧು ರಾಧಾ ಯಾದವ್ ಅಶ್ವನಿ ಕುಮಾರಿ ಅಪರ್ಣಾ ಮಂಡಲ್ ವಿ. ಸ್ನೇಹಾ ದೀಪ್ತಿ. ನೇರಪ್ರಸಾರ: ಸ್ಪೋರ್ಟ್ಸ್ 18 ಜಿಯೊ ಸಿನಿಮಾ ಆ್ಯಪ್ ಪಂದ್ಯ ಆರಂಭ: ರಾತ್ರಿ 7.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.