ಮರೆಯಲಾಗದ ಬ್ರ್ಯಾಂಡ್‌ನ ಕ್ರಿಕೆಟ್‌ ಆಡುವೆವು: ಹಾರ್ದಿಕ್ ಪಾಂಡ್ಯ ಮುಂಬೈ: ‘ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ ಯಾರೂ ಮರೆಯಲಾಗದಂಥ ಬ್ರ್ಯಾಂಡ್‌ನ ಕ್ರಿಕೆಟ್‌ ಆಟವನ್ನು ನಾವು ಆಡಲಿದ್ದೇವೆ.....’ ಹೀಗೆಂದು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳಿರುವ ಪ್ರಭಾವಿ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಶುಕ್ರವಾರ ಶಪಥ ಮಾಡಿದ್ದಾರೆ. ಆ ಮೂಲಕ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ. ಗುಜರಾತ್ ಟೈಟನ್ಸ್‌ ತಂಡದಿಂದ, ಪಾಂಡ್ಯಾ ಅವರನ್ನು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡ ‘ಖರೀದಿ’ ಮಾಡಿತ್ತು. ‍ಪಾಂಡ್ಯ 2015ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಪದಾರ್ಪಣೆ ಮಾಡಿದ್ದ ನಂತರ ಆ ತಂಡವು ನಾಲ್ಕು ಬಾರಿ ಚಾಂಪಿಯನ್‌ ಆಗಿತ್ತು. 2022ರಲ್ಲಿ ಅವರು ಗುಜರಾತ್‌ ಟೈಟನ್ಸ್ ತಂಡವನ್ನು ಸೇರಿಕೊಂಡಿದ್ದು ಅವರ ನೇತೃತ್ವದಲ್ಲಿ ತಂಡ ಚಾಂಪಿಯನ್ ಆಗಿತ್ತು. ಕಳೆದ ಐಪಿಎಲ್‌ನಲ್ಲಿ ತಂಡ ರನ್ನರ್ ಅಪ್‌ ಆಗಿತ್ತು. ‘ಮುಂಬೈ ತಂಡದ ಪೋಷಾಕು ಧರಿಸಿ ಆಡುವುದನೇ ನನಗೆ ತುಂಬಾ ವಿಶೇಷ ಭಾವನೆ ಮೂಡಿಸುತ್ತದೆ. ಇಲ್ಲಿಯೇ ಪ್ರಯಾಣ ಆರಂಭವಾಗಿತ್ತು. ತವರಿಗೆ ಮರಳಿದ್ದು, ಈಗ ತಂಡದ ಪರ ಆಡುವುದು ಸಂಭ್ರಮ ಮೂಡಿಸಿದೆ’ ಎಂದು ಅವರು ಹೇಳಿದ್ದಾರೆ. ಅವರು ಮಾತನಾಡಿರುವ ವಿಡಿಯೊವನ್ನು ಫ್ರಾಂಚೈಸಿಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ. ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವವನ್ನು ಈ ಬಾರಿ ರೋಹಿತ್ ಶರ್ಮಾ ಅವರಿಂದ ಪಾಂಡ್ಯ ಅವರಿಗೆ ವಹಿಸಲಾಗಿದೆ. ‘ಎಲ್ಲರಿಗೂ ಹೆಮ್ಮೆ ಎನಿಸುವ ಬ್ರ್ಯಾಂಡ್‌ನ ಕ್ರಿಕೆಟ್‌ ಆಡಲಿದ್ದೇವೆ ಎಂಬುದನ್ನು ಖಚಿತಪಡಿಸುತ್ತಿದ್ದೇನೆ. ಇದು ಯಾರೂ ಮರೆಯಲಾಗದ ಸವಾರಿಯಾಗಲಿದೆ’ ಎಂದೂ ಹೇಳಿದ್ದಾರೆ. ಮುಂಬೈ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್‌ 24ರಂದು ಅಹಮದಾಬಾದಿನಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.