ಅಫ್ಘಾನಿಸ್ತಾನ ಟಿ20 ಸರಣಿ ರದ್ದುಗೊಳಿಸಿದ ಆಸ್ಟ್ರೇಲಿಯಾ ಸಿಡ್ನಿ: ಈ ವರ್ಷದ ಕೊನೆಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಟಿ20 ಪುರುಷರ ಕ್ರಿಕೆಟ್ ಸರಣಿಯನ್ನು ಆಸ್ಟ್ರೇಲಿಯಾ ಮಂಗಳವಾರ ರದ್ದುಗೊಳಿಸಿದ್ದು, ತಾಲಿಬಾನ್‌ ಆಡಳಿತದ ದೇಶದಲ್ಲಿ ಮಹಿಳೆಯರ ಪರಿಸ್ಥಿತಿ ಹದಗೆಡುತ್ತಿದೆ ಎಂದು ಹೇಳಿದೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಪರಿಸ್ಥಿತಿಗಳು ಹದಗೆಡುತ್ತಿವೆ ಎಂಬ ಮಾಹಿತಿ ಬಂದಿದೆ. ಆದ್ದರಿಂದ ಆಗಸ್ಟ್‌ನಲ್ಲಿ ತಟಸ್ಥ ಸ್ಥಳದಲ್ಲಿ ನಿಗದಿಯಾಗಿದ್ದ ಮೂರು ಪಂದ್ಯಗಳ ಸರಣಿಯನ್ನು ಮುಂದೂಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಾಗಿದೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೊಡ್ಡ ರಾಷ್ಟ್ರಗಳ ವಿರುದ್ಧ ಗೆಲುವಿನಿಂದ ಉತ್ತೇಜಿಸಲ್ಪಟ್ಟಿದೆ. ಆದರೆ, ತಾಲಿಬಾನ್‌ನ ಇಸ್ಲಾಮಿಕ್ ಆಡಳಿತದ ಅಡಿ ಮಹಿಳೆಯರನ್ನು ಆಟದಿಂದ ಪರಿಣಾಮಕಾರಿಯಾಗಿ ನಿರ್ಬಂಧಿಸಲಾಗಿದೆ. ವಿಶ್ವದಾದ್ಯಂತ ಕ್ರಿಕೆಟ್‌ನಲ್ಲಿ ಮಹಿಳೆಯರು ಮತ್ತು ಹುಡುಗಿಯರ ಭಾಗವಹಿಸುವಿಕೆಯನ್ನು ಬೆಂಬಲಿಸುವ ಬಲವಾದ ಬದ್ಧತೆಯ ತನ್ನ ನಿಲುವನ್ನು ಮುಂದುವರಿಸಿದೆ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ಆಡಳಿತ ಮಂಡಳಿ ಹೇಳಿದೆ. 2021ರ ಬಳಿಕ ಮೂರನೇ ಬಾರಿಗೆ ಅಫ್ಘಾನಿಸ್ತಾನ ವಿರುದ್ಧ ಅಂತರರಾಷ್ಟ್ರೀಯ ಟೂರ್ನಿಗಳ ಹೊರಗೆ ಆಡಲು ಆಸ್ಟ್ರೇಲಿಯಾ ನಿರಾಕರಿಸಿದೆ. ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ಕೆಲವು ತಿಂಗಳ ನಂತರ ಕ್ರಿಕೆಟ್ ಆಸ್ಟ್ರೇಲಿಯಾ 2021 ರಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಿತು. ‘ಅಫ್ಘಾನಿಸ್ತಾನದಲ್ಲಿ ಮಹಿಳಾ ಕ್ರಿಕೆಟ್ ಬೆಂಬಲಿಸುವುದಿಲ್ಲ ಎಂಬ ಇತ್ತೀಚಿನ ಮಾಧ್ಯಮ ವರದಿಗಳು ದೃಢಪಟ್ಟರೆ, ಅಫ್ಘಾನಿಸ್ತಾನಕ್ಕೆ ಆತಿಥ್ಯ ವಹಿಸದಿರುವುದನ್ನು ಬಿಟ್ಟು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬೇರೆ ಆಯ್ಕೆಯಿಲ್ಲ’ ಎಂದು ಅಧಿಕಾರಿಗಳು ಆ ಸಮಯದಲ್ಲಿ ಹೇಳಿದರು. ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.