2024 | ಮೊದಲ ಪಂದ್ಯಕ್ಕೆ ಸೂರ್ಯ ಕುಮಾರ್ ಯಾದವ್ ಅಲಭ್ಯ ಮುಂಬೈ: ವಿಶ್ವದ ಅಗ್ರಮಾನ್ಯ ಟಿ20 ಬ್ಯಾಟರ್‌ ಸೂರ್ಯ ಕುಮಾರ್ ಯಾದವ್ ಅವರು ಇಂಡಿಯನ್ ಪ್ರೀಮಿ ಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯ ಕಳೆದುಕೊಳ್ಳಲಿದ್ದಾರೆ. ಎನ್‌ಸಿಎನಿಂದ (ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ) ಅವರಿಗೆ ಇನ್ನೂ ಫಿಟ್ನೆಸ್ ಪ್ರಮಾಣಪತ್ರ ಲಭಿಸಿಲ್ಲ. ಮುಂಬೈ ಮಾರ್ಚ್‌ 24ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್‌ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ. 33 ವರ್ಷದ ಸೂರ್ಯ, ‘ಸ್ಪೋರ್ಟ್ಸ್‌ ಅರ್ನಿಯಾ’ ಶಸ್ತ್ರಚಿಕಿತ್ಸೆಗೊಳಗಾದ ನಂತರ ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಡಿಸೆಂಬರ್‌ನಿಂದ ಅವರು ಯಾವುದೇ ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ. ಅವರು ಮಂಗಳವಾರ ಫಿಟ್ನೆಸ್‌ ಟೆಸ್ಟ್‌ಗೆ ಒಳಗಾಗಿದ್ದರು. ಅವರು ಇನ್ಸ್ಟಾದಲ್ಲಿ ‘ಹಾರ್ಟ್‌ಬ್ರೇಕ್‌’ ಎಂಬ ಸೂಚ್ಯ ಸಂದೇಶ ಹಾಕಿದ್ದಾರೆ. ಮುಂಬೈ ಇಂಡಿಯನ್ಸ್‌ನ ನಂತರದ ಮೂರು ಪಂದ್ಯಗಳಿಗೆ (27ರಂದು ಸನ್‌ರೈಸರ್ಸ್‌ ವಿರುದ್ಧ, ಏ. 1ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ, ಏ. 7ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ) ಅವರ ಲಭ್ಯತೆ ನಂತರ ಗೊತ್ತಾಗಲಿದೆ. 3 ಪಂದ್ಯಗಳಿಗೆ ಹಸರಂಗ ಇಲ್ಲ: ಆಲ್‌ರೌಂಡರ್ ವನಿಂದು ಹಸರಂಗ ಅವರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮಾರ್ಚ್‌ 22ರಂದು ಆರಂಭವಾಗುವ ಎರಡು ಟೆಸ್ಟ್‌ಗಳ ಸರಣಿಗೆ ಅವರನ್ನು ಶ್ರೀಲಂಕಾ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸೀಮಿತ ಓವರುಗಳ ಪಂದ್ಯದಲ್ಲಿ ಹೆಚ್ಚು ಗಮನ ಹರಿಸಲು ಅವರು ಕಳೆದ ಆಗಸ್ಟ್‌ನಲ್ಲಿ ಟೆಸ್ಟ್‌ ಮಾದರಿಗೆ ವಿದಾಯ ಹೇಳಿದ್ದರು. ಆದರೆ 26 ವರ್ಷದ ಲೆಗ್‌ ಬ್ರೇಕ್‌ ಬೌಲರ್‌ ಮಂಗಳವಾರ ಪ್ರಕಟಿಸಿದ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಸರಂಗ ಅವರನ್ನು ₹1.5 ಕೋಟಿ ಮೊತ್ತಕ್ಕೆ ಸನ್‌ರೈಸರ್ಸ್ ತಂಡ ಪಡೆದಿತ್ತು. ಹೈದರಾಬಾದಿನ ತಂಡ ಮಾ.23ರಂದು ಮೊದಲ ಪಂದ್ಯವನ್ನು ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ಆಡಲಿದೆ. ಮುಂಬೈ ತಂಡಕ್ಕೆ ಲ್ಯೂಕ್ ವುಡ್: ಕಾಲಿನ ಮೂಳೆ ಮುರಿತದಿಂದಾಗಿ ಆಸ್ಟ್ರೇಲಿಯಾದ ಎಡಗೈ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಅವರು ತಮಗೆ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ತರಬೇತಿ ವೇಳೆ ಆಕಸ್ಮಿಕವಾಗಿ ಅವರಿಗೆ ಮೂಳೆಮುರಿತವಾಗಿದೆ. 33 ವರ್ಷದ ಜೇಸನ್ ಬದಲು ಇಂಗ್ಲೆಂಡ್‌ನ ಎಡಗೈ ವೇಗಿ ಲ್ಯೂಕ್ ವುಡ್‌ ಅವರು ಮುಂಬೈ ತಂಡ ಸೇರಿಕೊಳ್ಳಲಿದ್ದಾರೆ. ತ್ವರಿತ ನಿರ್ಣಯ: ಐಪಿಎಲ್‌ಗೆ ‘ಸ್ಮಾರ್ಟ್‌ ರಿಪ್ಲೇ ಸಿಸ್ಟಂ’ ತ್ವರಿತವಾಗಿ ಮತ್ತು ಕರಾರುವಾಕ್‌ ಆಗಿ ನಿರ್ಣಯ ನೀಡಲು ನೆರವಾಗುವ ‘ಸ್ಮಾರ್ಟ್‌ ರಿಪ್ಲೇ ಸಿಸ್ಟಂ’ ಅನ್ನು ಈ ಬಾರಿ ಐಪಿಎಲ್‌ನಲ್ಲಿ ಜಾರಿಗೊಳಿಸಲಾಗುವುದು. ಟಿವಿ ಅಂಪೈರ್‌ ಅವರು ತಮ್ಮ ಕೊಠಡಿಯಲ್ಲಿ, ಹಾಕ್‌–ಐ ವ್ಯವಸ್ಥೆ ನಿರ್ವಹಿಸುವ ಇಬ್ಬರು ಅಪರೇಟರ್‌ಗಳಿಂದ ನೇರವಾಗಿ ಇನ್‌ಪುಟ್ಸ್‌ (ದೃಶ್ಯಾವಳಿಗಳನ್ನು) ಪಡೆಯಲಿದ್ದಾರೆ. ಈ ಅಪರೇಟರ್‌ಗಳೂ ಟಿವಿ ಅಂಪೈರ್‌ ಜೊತೆಗೇ ಇರುತ್ತಾರೆ. ಎಂಟು ಹೈಸ್ಪೀಡ್‌ ಕ್ಯಾಮೆರಾಗಳು ಸೆರೆಹಿಡಿಯುವ ದೃಶ್ಯಾವಳಿಗಳ ನೆರವಿನಿಂದ ಟಿವಿ ಅಂಪೈರ್‌ಗಳು ಕ್ಷಿಪ್ರವಾಗಿ ತೀರ್ಪು ನೀಡಲಿದ್ದಾರೆ. ಅವರಿಗೆ ವಿಶ್ಲೇಷಣೆ ನಡೆಸಲು ಹೆಚ್ಚು ಮತ್ತು ಸ್ಪಷ್ಟ ದೃಶ್ಯಾವಳಿಗಳು ಸಿಗಲಿದ್ದು, ಸ್ಪ್ಲಿಟ್‌ ಸ್ಕ್ರೀನ್‌ ಇಮೇಜ್‌ಗಳೂ ಲಭ್ಯವಿರಲಿವೆ. ಹೀಗಾಗಿ ಈ ಹಿಂದಿಗಿಂತ ಬೇಗನೇ ನಿರ್ಣಯಕ್ಕೆ ಬರಲು ಅನುಕೂಲವಾಗಲಿದೆ. ಹೊಸ ವ್ಯವಸ್ಥೆಯಲ್ಲಿ ಟಿವಿ ಪ್ರಸಾರ ನಿರ್ವಾಹಕರ ಪಾತ್ರ ಹೆಚ್ಚು ಇರಲಿದೆ. ಅವರು ಅಂಪೈರ್ ಮತ್ತು ಹಾಕ್‌ ಐ ಅಪರೇಟರ್‌ಗಳ ಮಧ್ಯೆ ಸುಗಮ ನಿರ್ವಹಣೆಯ ಪಾತ್ರ ವಹಿಸುವರು. ಈ ವ್ಯವಸ್ಥೆಯಿಂದ ಅಂಪೈರ್‌ಗಳು ತೀರ್ಪಿನ ವೇಳೆ ವಿವಿಧ ಕೋನಗಳಿಂದ ದೃಶ್ಯಾವಳಿಗಳನ್ನು ಪಡೆಯಲಿದ್ದಾರೆ. ಇದರಿಂದ ಬೌಂಡರಿ ಗೆರೆಯಲ್ಲಿ ಹಿಡಿಯುವ ಕ್ಯಾಚ್‌ಗಳ ಬಗ್ಗೆ, ಕಾಟ್‌ ಬಿಹೈಂಡ್‌, ಲೆಗ್‌ ಬಿಫೋರ್‌, ಸ್ಟಂಪಿಂಗ್ ಕುರಿತು ಇಂಚಿಂಚೂ ನಿಖರವಾದ ಚಿತ್ರಣ ಸಿಗಲಿದೆ. ಸ್ಮಾರ್ಟ್‌ ರಿಪ್ಲೇ ಸಿಸ್ಟಂ ಜೊತೆಗೆ ಕಾರ್ಯನಿರ್ವಹಿಸುವ ಬಗ್ಗೆ ಬಿಸಿಸಿಐ, ಆಯ್ದ ಅಂಪೈರ್‌ಗಳಿಗೆ ಎರಡು ದಿನಗಳ ಕಾರ್ಯಾಗಾರ ಏರ್ಪಡಿಸಿತ್ತು. ದೇಶದ ಮತ್ತು ಹೊರದೇಶಗಳ 15 ಅಂಪೈರ್‌ಗಳು ಭಾಗವಹಿಸಿದ್ದರು. ‘ದಿ ಹಂಡ್ರೆಡ್‌’ ಪಂದ್ಯಾವಳಿಗೂ ಈ ವ್ಯವಸ್ಥೆಯನ್ನು ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪ್ರಾಯೋಗಿಕವಾಗಿ ಬಳಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.