2024 | ಕಾರ್ತಿಕ್–ರಾವತ್ ಜೊತೆಯಾಟ; ಚೆನ್ನೈಗೆ 174 ರನ್ ಗುರಿ ನೀಡಿದ ಚೆನ್ನೈ: ವಿಕೆಟ್‌ಕೀಪರ್‌ ಬ್ಯಾಟರ್‌ಗಳಾದ ದಿನೇಶ್‌ ಕಾರ್ತಿಕ್‌ ಮತ್ತು ಅನೂಜ್‌ ರಾವತ್‌ ಕೊನೆಯಲ್ಲಿ ತೋರಿದ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ, ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಎದುರು ಉತ್ತಮ ಮೊತ್ತ ಕಲೆಹಾಕಿದೆ. 17ನೇ ಆವೃತ್ತಿಯ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್‌ ಗಳಿಸಿದೆ. ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿಗೆ ನಾಯಕ ಫಫ್‌ ಡು ಪ್ಲೆಸಿ (35) ಹಾಗೂ ವಿರಾಟ್‌ ಕೊಹ್ಲಿ ಉತ್ತಮ ಆರಂಭ ಒದಗಿಸಿದರು. ಆದರೆ, 5ನೇ ಓವರ್‌ ಬೌಲಿಂಗ್‌ ಮಾಡಿದ ಮುಸ್ತಫಿಜುರ್ ರೆಹಮಾನ್, ಒಂದೇ ಓವರ್‌ನಲ್ಲಿ ಡುಪ್ಲೆಸಿ ಹಾಗೂ ರಜತ್ ಪಾಟೀದಾರ್ (0) ವಿಕೆಟ್‌ ಪಡೆದು, ತಮ್ಮ ತಂಡಕ್ಕೆ ಮೇಲುಗೈ ತಂದುಕೊಟ್ಟರು. ನಂತರ ಬಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಹ, ದೀಪಕ್ ಚಾಹರ್ ಬೌಲಿಂಗ್‌ನಲ್ಲಿ ಸೊನ್ನೆ ಸುತ್ತಿದರು. ಈ ವೇಳೆ ಜೊತೆಯಾದ ಕೊಹ್ಲಿ (21) ಹಾಗೂ ಕ್ಯಾಮರಾನ್ ಗ್ರೀನ್ (18), 4ನೇ ವಿಕೆಟ್‌ ಪಾಲುದಾರಿಕೆಯಲ್ಲಿ 33 ರನ್‌ ಸೇರಿಸಿದರಾದರೂ, ಕೇವಲ 1 ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಆಗ ತಂಡದ ಮೊತ್ತ 11.4 ಓವರ್‌ಗಳಲ್ಲಿ ಕೇವಲ 78 ರನ್‌ಗಳಿಗೆ 5 ವಿಕೆಟ್‌ ಆಗಿತ್ತು. ರಾವತ್–ದಿನೇಶ್ ಆಸರೆ ಸಂಕಷ್ಟದ ಸಂದರ್ಭದಲ್ಲಿ ಜೊತೆಯಾದ ದಿನೇಶ್‌ ಕಾರ್ತಿಕ್‌ ಮತ್ತು ಅನೂಜ್‌ ರಾವತ್‌ ಮುರಿಯದ 6ನೇ ವಿಕೆಟ್‌ ಪಾಲುದಾರಿಕೆಯಲ್ಲಿ 95 ರನ್‌ ಕಲೆಹಾಕಿದರು. 25 ಎಸೆತಗಳನ್ನು ಎದುರಿಸಿದ ಅನೂಜ್‌, 4 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 48 ರನ್ ಗಳಿಸಿದರೆ, ದಿನೇಶ್, 26 ಎಸೆತಗಳಲ್ಲಿ 38 ರನ್ ಗಳಿಸಿ ಕೊನೇ ಎಸೆತದಲ್ಲಿ ಔಟಾದರು. ಅವರ ಇನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಇದ್ದವು. ಇವರಿಬ್ಬರ ಆಟದಿಂದಾಗಿ, ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಚೆನ್ನೈ ಪರ, ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಮುಸ್ತಫಿಜುರ್ 4 ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್‌ ಪಡೆದು ಮಿಂಚಿದರು. ಈ ಕ್ರೀಡಾಂಗಣದಲ್ಲಿ ಚೆನ್ನೈ ಎದುರು ಆರ್‌ಸಿಬಿ, 2009ರಿಂದ ಈಚೆಗೆ ಒಮ್ಮೆಯೂ ಗೆದ್ದಿಲ್ಲ. ಹಾಗಾಗಿ, ಈ ಪಂದ್ಯವನ್ನಾದರೂ ಗೆಲ್ಲುವುದೇ ಎಂಬುದನ್ನು ಕಾದು ನೋಡಬೇಕಿದೆ. ಆರ್‌ಸಿಬಿ: ಫಫ್‌ ಡು ಪ್ಲೆಸಿ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಕ್ಯಾಮರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಕರಣ್‌ ಶರ್ಮಾ, ಮಯಂಕ್ ಡಾಗರ್, ಮೊಹಮ್ಮದ್ ಸಿರಾಜ್, ಸಿಎಸ್‌ಕೆ: ಋತುರಾಜ್ ಗಾಯಕವಾಡ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಮಹೇಂದ್ರ ಸಿಂಗ್‌ ಧೋನಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ರವೀಂದ್ರ ಜಡೇಜ, ಸಮೀರ್ ರಿಜ್ವಿ, ಮಹೀಶ್ ತೀಕ್ಷಣ, ಮುಸ್ತಫಿಜುರ್ ರೆಹಮಾನ್ 🚨 🚨 ' 1⃣ # 2024 @ @ . ▶️ ://./4j6FaLF15Y # ../QA42EDNqtJ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.