: ಸಂಸ್ಕರಿಸಿದ ನೀರು ಕ್ರೀಡಾಂಗಣಕ್ಕೆ ಬಳಕೆ; KSCAಗೆ ಹಸಿರುಪೀಠ ನೋಟಿಸ್ ನವದೆಹಲಿ: ಬೆಂಗಳೂರು ನಗರದಲ್ಲಿ ನೀರಿನ ಕೊರತೆ ನಡುವೆ ಮುಂಬರುವ ಐಪಿಎಲ್ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಪೂರೈಕೆ ಕುರಿತಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು(ಎನ್‌ಜಿಟಿ) ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ(ಕೆಎಸ್‌ಸಿಎ) ನೋಟಿಸ್ ಜಾರಿ ಮಾಡಿದೆ. ಕೆಎಸ್‌ಸಿಎ ಮನವಿ ಮೇರೆಗೆ ಬೆಂಗಳೂರು ಜಲ ಮಂಡಳಿಯು ಸಂಸ್ಕರಿಸಿದ ನೀರನ್ನು ಕ್ರೀಡಾಂಗಣಕ್ಕೆ ಪೂರೈಕೆ ಮಾಡಲು ಒಪ್ಪಿಗೆ ಸೂಚಿಸಿದೆ ಎಂಬ ಮಾಧ್ಯಮ ವರದಿಗಳನ್ನು ಆಧರಿಸಿ, ಎನ್‌ಜಿಟಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ವರದಿಗಳ ಪ್ರಕಾರ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರು ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, ಪಂದ್ಯದ ಪ್ರತಿ ದಿನ ಸುಮಾರು 75,000 ಲೀಟರ್ ನೀರಿನ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಹೇಳಿದ್ದಾರೆ. ಜಲ ತಜ್ಞ ಎ ಸೆಂಥಿಲ್ ವೇಲ್ ಅವರನ್ನು ಒಳಗೊಂಡ ಪೀಠವು, ಕರ್ನಾಟಕದ ರಾಜಧಾನಿಯಲ್ಲಿ ನಿತ್ಯ 500 ದಶಲಕ್ಷ ಲೀಟರ್‌(ಎಂಎಲ್‌ಡಿ) ನೀರಿನ ಕೊರತೆ ಇದೆ ಎಂಬುದನ್ನು ಒತ್ತಿ ಹೇಳಿದೆ. ನಗರದಲ್ಲಿ ಕುಡಿಯುವ ನೀರನ್ನು ವಾಹನಗಳನ್ನು ತೊಳೆಯಲು, ಕೈತೋಟ, ಕಟ್ಟಡ ಮತ್ತು ನಿರ್ವಹಣಾ ಉದ್ದೇಶಗಳಿಗೆ ಬಳಸದಂತೆ ನಿರ್ಬಂಧ ಹೇರಿರುವ ಜಲಮಂಡಳಿ, ಕ್ರಿಕೆಟ್ ಮೈದಾನಕ್ಕೆ ಮಾತ್ರ ನೀರು ಸರಬರಾಜು ಮಾಡುತ್ತಿದೆ ಎಂಬುದರ ಬಗ್ಗೆಯೂ ಗಮನ ಸೆಳೆದಿದೆ. ‘ಈ ಸುದ್ದಿ ತುಣುಕು ಪರಿಸರ ನಿಯಮಗಳಿಗೆ ಸಂಬಂಧಿಸಿದ ವಸ್ತುನಿಷ್ಠ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ’ಎಂದು ಪೀಠ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.