ಡೇವಿಸ್‌ ಕಪ್‌: ಹಿಂದೆ ಸರಿದ ಬೋಪಣ್ಣ ನವದೆಹಲಿ: ಮೊಣಕಾಲು ನೋವಿನಿಂದ ಬಳಲುತ್ತಿರುವ ಭಾರತದ ರೋಹನ್ ಬೋಪಣ್ಣ ಅವರು ಮುಂಬರುವ ನಾರ್ವೆ ವಿರುದ್ಧದ ಡೇವಿಸ್‌ ಕಪ್ ಟೆನಿಸ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಸೆಪ್ಟೆಂಬರ್‌ 16 ಮತ್ತು 17ರಂದು ಈ ಪಂದ್ಯ ನಿಗದಿಯಾಗಿದೆ. ಸುಮಿತ್ ನಗಾಲ್‌, ರಾಮಕುಮಾರ್ ರಾಮನಾಥನ್‌, ಪ್ರಜ್ಞೇಶ್ ಗುಣೇಶ್ವರನ್‌, ಯೂಕಿ ಭಾಂಭ್ರಿ ಮತ್ತು ಮುಕುಂದ್‌ ಶಶಿಕುಮಾರ್ ತಂಡದಲ್ಲಿರುವ ಇನ್ನುಳಿದ ಆಟಗಾರರು. ‘ಮೊಣಕಾಲಿನಲ್ಲಿ ಊತ ಇದೆ. ವಿಶ್ರಾಂತಿ ಬೇಕಾಗಿದೆ. ಹೀಗಾಗಿ ನಾರ್ವೆ ಎದುರಿನ ಡೇವಿಸ್‌ ಕಪ್ ಪಂದ್ಯದಿಂದ ಹಿಂದೆ ಸರಿಯುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು‘ ಎಂದು ಬೋಪಣ್ಣ ಟ್ವೀಟ್ ಮಾಡಿದ್ದಾರೆ. ಬೋಪಣ್ಣ ಅವರ ಸ್ಥಾನಕ್ಕೆ ಡಬಲ್ಸ್‌ನಲ್ಲಿ ಸಾಕೇತ್ ಮೈನೇನಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಚೆನ್ನೈ ಓಪನ್‌;ಅಂಕಿತಾಗೆ ಕಠಿಣ ಸವಾಲು: ಸೋಮವಾರದಿಂದ ನಡೆಯಲಿರುವ ಚೆನ್ನೈ ಓಪನ್ ಡಬ್ಲ್ಯುಟಿಎ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಅಂಕಿತಾ ರೈನಾ ಅವರಿಗೆ ಜರ್ಮನಿಯ ತತಿಯಾನ ಮರಿಯಾ ಸವಾಲು ಎದುರಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಟೂರ್ನಿಯ ಡ್ರಾ ಕಾರ್ಯಕ್ರಮ ಶನಿವಾರ ನಡೆಯಿತು. ಕರ್ಮನ್‌ಕೌರ್ ಥಂಡಿ ಅವರು ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಕ್ಲೊ ಪಕೆಟ್‌ ಅವರನ್ನು ಎದುರಿಸುವರು. ಇಲ್ಲಿ ಮೊದಲ ಶ್ರೇಯಾಂಕ ಪಡೆದಿರುವ ಅಮೆರಿಕದ ಅಲಿಸನ್‌ ರಿಸ್ಕೆ ಅಮೃತರಾಜ್‌ ಅವರು ರಷ್ಯಾದ ಅನಸ್ತೇಸಿಯಾ ಗ್ಯಾಸನೊವಾ ಅವರಿಗೆ ಮುಖಾಮುಖಿಯಾಗುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.