ಫೈನಲ್‌ಗೆ ಅಲ್ಕರಾಜ್‌, ರೂಡ್‌ ನ್ಯೂಯಾರ್ಕ್‌ (ರಾಯಿಟರ್ಸ್‌/ ಎಎಫ್‌ಪಿ): ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌ ಮತ್ತು ನಾರ್ವೆಯ ಕ್ಯಾಸ್ಪರ್‌ ರೂಡ್‌ ಅವರು ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗೆ ಪೈಪೋಟಿ ನಡೆಸಲಿದ್ದಾರೆ. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ 19 ವರ್ಷದ ಅಲ್ಕರಾಜ್‌ 6-7(6), 6-3, 6-1, 6-7(5), 6-3 ರಲ್ಲಿ ಆತಿಥೇಯ ದೇಶದ ಭರವಸೆಯಾಗಿದ್ದ ಫ್ರಾನ್ಸೆಸ್ಕೊ ಟೈಫೊ ಅವರನ್ನು ಮಣಿಸಿದರು. ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ರೂಡ್‌ 7-6(5), 6-2, 5-7, 6-2 ರಲ್ಲಿ ರಷ್ಯಾದ ಕರೆನ್ ಕಚನೊವ್ ವಿರುದ್ಧ ಗೆದ್ದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಅಲ್ಕರಾಜ್‌ ಅವರು ರೂಡ್‌ ವಿರುದ್ಧ ಗೆದ್ದರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಅತಿಕಿರಿಯ ಆಟಗಾರ ಎನಿಸಲಿದ್ದಾರೆ. ಆಸ್ಟ್ರೇಲಿಯಾದ ಲೇಟನ್‌ ಹೆವಿಟ್‌ ಹೆಸರಿನಲ್ಲಿದ್ದ ದಾಖಲೆ ಮುರಿಯಲಿದೆ. ಹೆವಿಟ್‌ 2003 ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕಕ್ಕೆ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಬರ ನೀಗಿಸುವ ನಿರೀಕ್ಷೆ ಮೂಡಿಸಿದ್ದ ಟೈಫೊ ಅವರ ಗೆಲುವಿನ ಓಟಕ್ಕೆ ತೆರೆಬಿತ್ತು. ಆ್ಯಂಡಿ ರಾಡಿಕ್‌ 2003 ರಲ್ಲಿ ಗೆದ್ದ ಬಳಿಕ ಅಮೆರಿಕದ ಯಾರೂ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿಲ್ಲ. 26 ವರ್ಷದ ಟೈಫೊ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ನ ದಿಗ್ಗಜ ಆಟಗಾರ ರಫೆಲ್ ನಡಾಲ್‌ಗೆ ಸೋಲುಣಿಸಿದ್ದರು. ಆದರೆ ಅವರಿಗೆ ಸ್ಪೇನ್‌ನ ಯುವ ಆಟಗಾರನ ತಡೆ ದಾಟಲು ಆಗಲಿಲ್ಲ. ಮೊದಲ ಸೆಟ್‌ ಟೈಬ್ರೇಕರ್‌ನಲ್ಲಿ ಗೆದ್ದ ಟೈಫೊ, ಎರಡು ಮತ್ತು ಮೂರನೇ ಸೆಟ್‌ಗಳನ್ನು ಸುಲಭವಾಗಿ ಎದುರಾಳಿಗೆ ಒಪ್ಪಿಸಿದರು. ನಾಲ್ಕನೇ ಸೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡು ಟೈಬ್ರೇಕರ್‌ನಲ್ಲಿ ಗೆದ್ದು, 2–2 ರಲ್ಲಿ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಸ್ಪೇನ್‌ ಆಟಗಾರನ ಕೈಮೇಲಾಯಿತು. ತಮ್ಮ ವೇಗದ ಸರ್ವ್‌ ಮತ್ತು ಆ್ಯಕ್ರೊಬ್ಯಾಟಿಕ್‌ ಶಾಟ್‌ಗಳ ಮೂಲಕ ಅಲ್ಕರಾಜ್‌ ಪ್ರೇಕ್ಷಕರ ಮನಗೆದ್ದರು. ಅಮೆರಿಕದ ಪೀಟ್‌ ಸಾಂಪ್ರಾಸ್‌ (1990) ಬಳಿಕ ಇಲ್ಲಿ ಫೈನಲ್‌ಗೇರಿದ ಅತಿಕಿರಿಯ ಆಟಗಾರ ಎಂಬ ಗೌರವ ಅವರಿಗೆ ಒಲಿಯಿತು. 55 ಶಾಟ್‌ಗಳ ರ‍್ಯಾಲಿ: ಕಚನೊವ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಐದನೇ ಶ್ರೇಯಾಂಕದ ರೂಡ್‌ ಸೊಗಸಾದ ಆಟವಾಡಿದರು. ಪ್ರಬಲ ಪೈಪೋಟಿ ನಡೆದ ಮೊದಲ ಸೆಟ್‌ಅನ್ನು ಅವರು ಟೈಬ್ರೇಕರ್‌ನಲ್ಲಿ ಗೆದ್ದು 1–0 ಮುನ್ನಡೆ ಪಡೆದರು. ಟೈಬ್ರೇಕರ್‌ನಲ್ಲಿ ಇಬ್ಬರೂ 55 ಶಾಟ್‌ಗಳ ಸುದೀರ್ಘ ರ‍್ಯಾಲಿ ಆಡಿ, ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಎರಡನೇ ಸೆಟ್‌ ಸುಲಭವಾಗಿ ಗೆದ್ದ ರೂಡ್‌, ಮೂರನೇ ಸೆಟ್‌ಅನ್ನು ಎದುರಾಳಿಗೆ ಒಪ್ಪಿಸಿದರು. ಆದರೆ ನಾಲ್ಕನೇ ಸೆಟ್‌ನಲ್ಲಿ ಶಿಸ್ತಿನ ಆಟವಾಡಿ ಪ್ರಶಸ್ತಿ ಸುತ್ತು ತಲುಪಿದರು. ರೂಡ್‌ ಮತ್ತು ಅಲ್ಕರಾಜ್‌ ಅವರು ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದಿದ್ದ ಮಿಯಾಮಿ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಅಲ್ಕರಾಜ್ ಅವರು ರೂಡ್‌ ಎದುರು ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.